ಬೆಳಗಾವಿ: ಬಾಂಗ್ಲಾದೇಶದ ಸರ್ಕಾರ ಇಸ್ಕಾನ್ ಮಂದಿರದ ಚಿನ್ಮಯ್ ಕೃಷ್ಣದಾಸ್ ಶ್ರೀಗಳನ್ನು ಬಂಧಿಸಿರುವ ಕ್ರಮ ಖಂಡಿಸಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಶನಿವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ವಿವಿಧ ಮಠಗಳ ಸ್ವಾಮೀಜಿಗಳ ನೇತೃತ್ವದಲ್ಲಿ ಇಲ್ಲಿನ ಚನ್ನಮ್ಮ ಸರ್ಕಲ್ ನಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದ ಹಿಂದೂ ಸಂಘಟನೆ ಮುಖಂಡರು, ಕಾರ್ಯಕರ್ತರು, ಬಾಂಗ್ಲಾ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.
ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗ ನಡೆಸಿದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಿ, ಇಸ್ಕಾನ್ ಶ್ರೀಗಳನ್ನು ಬಿಡುಗಡೆಗೊಳಿಸಲು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾನಿರತ ನ್ಯಾಯವಾದಿ ಜಯಶ್ರೀ ಮಂಡ್ರೊಳಿ ಮಾತನಾಡಿ, ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಒಗ್ಗೂಡಿಸಲು ಶ್ರಮಿಸುತ್ತಿದ್ದ ಚಿನ್ಮಯ್ ಕೃಷ್ಣದಾಸ್ ಶ್ರೀಗಳನ್ನು ಸಕಾರಣವಿಲ್ಲದೇ ಬಂಧಿಸಿ ಕಾರಾಗೃಹದಲ್ಲಿ ಇಡಲಾಗಿದೆ. ಹೀಗಾಗಿ, ಹೊರ ದೇಶಗಳಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ಅನ್ಯಾಯದ ವಿರುದ್ಧ ಎಲ್ಲ ಹಿಂದೂಗಳು ಒಗ್ಗಟ್ಟಾಗಬೇಕೆಂದು ಕರೆ ನೀಡಿದರು.
ಬಾಂಗ್ಲಾದ ಉಸ್ತುವಾರಿ ಮುಖ್ಯಸ್ಥ ಮೊಹಮ್ಮದ್ ಯೂನಿಸ್ ಅವರು ಇಸ್ಕಾನ್ ಚಿನ್ಮಯ್ ಕೃಷ್ಣದಾಸ್ ಅವರ ವಿರುದ್ಧ ಕೇಸ್ ದಾಖಲಿಸಿ ಜೈಲಿಗಟ್ಟಿದ್ದಾರೆ. ಎಲ್ಲ ಸ್ವಾಮೀಜಿಗಳು ರಸ್ತೆಗಳಿದರೆ ನಿಮ್ಮ ಗತಿ ಏನಾಗುತ್ತಿತ್ತು ಎಂಬುದನ್ನು ಯೋಚಿಸಿ ಎಂದು ಆಕ್ರೋಶ ಹೊರಹಾಕಿದರಲ್ಲದೇ, ಪ್ರಧಾನ ಮಂತ್ರಿ ಮೋದಿ ಅವರು ಕೂಡಲೇ ಶ್ರೀಗಳ ಬಿಡುಗಡೆ ಗೊಳಿಸಬೇಕೆಂದು ಒತ್ತಾಯಿಸಿದರು.
ಬಾಂಗ್ಲಾದೇಶದಲ್ಲಿನ ಹಿಂದೂಗಳ ರಕ್ಷಣೆಗೆ ಭಾರತ ಸರ್ಕಾರ ಮುಂದಾಗಬೇಕು. ಹಿಂದುಗಳ ಮತದಿಂದ ಆರಿಸಿ ಬಂದ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಹಿಂದುಗಳ ಕಗ್ಗೋಲೆಯನ್ನು ತಪ್ಪಿಸಬೇಕು. ಯುಕ್ರೇನ್ ನಲ್ಲಿ ಶಾಂತಿ ಸ್ಥಾಪನೆಗೆ ಮುಂದಾಗುವ ಪ್ರಧಾನಿ ಮೋದಿಯವರು ಬಾಂಗ್ಲಾದೇಶದಲ್ಲಿನ ಹಿಂದುಗಳ ರಕ್ಷಣೆಗೂ ಮುಂದಾಗಬೇಕೆಂದು ವಿಶ್ವ ಹಿಂದೂ ಪರಿಷತ್ತಿನ ಮುಖಂಡ ಕೃಷ್ಣ ಭಟ್ ಒತ್ತಾಯಿಸಿದರು.
ಶಿವಾಪುರ ಮುಪ್ಪಿನಮಠ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಬಂಧನದಲ್ಲಿರುವ ಚಿನ್ಮಯ ಕೃಷ್ಣದಾಸ ಸ್ವಾಮೀಜಿಯವರನ್ನು ತಕ್ಷಣ ಬಿಡುಗಡೆ ಮಾಡಬೇಕು. ಇಲ್ಲವಾದರೆ ಸ್ವಾಮೀಜಿಗಳೆಲ್ಲರೂ ಬೀದಿಗಿಳಿಯಬೇಕಾಗುತ್ತದೆ. ಬಾಂಗ್ಲಾದೇಶದಲ್ಲಿ ಹಿಂದುಗಳ ರಕ್ಷಣೆ ಮಾಡಿ, ಬಾಂಗ್ಲಾ ದೇಶದ ಪ್ರಧಾನಿ ಯುನೂಸ್ ಅವರ ಕಿವಿ ಹಿಂಡುವ ಕೆಲಸವನ್ನು ಪ್ರಧಾನಿ ಮೋದಿಯವರು ಮಾಡಬೇಕೆಂದರು.
ವಿಶ್ವ ಹಿಂದೂ ಪರಿಷತ್ ನ ವಿಜಯ ಜಾಧವ ಮಾತನಾಡಿ, ಬಾಂಗ್ಲಾ ಹಿಂದುಗಳ ಬೆನ್ನೆಲುಬಾಗಿರುವ ಕ್ರಷ್ಣದಾಸ ಪ್ರಭು ಸ್ವಾಮೀಜಿಯವರ ಬಿಡುಗಡೆಗೆ ಭಾರತದ ಸಂತರೆಲ್ಲಾ ಒಂದಾಗಿ ಪ್ರತಿಭಟನೆ ಮಾಡಬೇಕೆಂದು ಕರೆ ನೀಡಿದರು.
ವಿವಿಧ ಮಠಾಧೀಶರು, ವಿಶ್ವ ಹಿಂದೂ ಪರಿಷತ್ತಿನ ಮುಖಂಡರು, ಕಾರ್ಯಕರ್ತರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.—–
ತಕ್ಷಣವೇ ಸ್ವಾಮೀಜಿ ಬಿಡುಗಡೆ ಆಗಲಿ….
ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಉಕ್ರೇನನಲ್ಲಿಯ ಪರಿಸ್ಥಿತಿ ಸುಧಾರಣೆಗೆ ಹಾಗೂ ಸಂಧಾನಕ್ಕೆ ಕೊಟ್ಟ ಮಹತ್ವವನ್ನು ಬಾಂಗ್ಲಾದೇಶದ ಹಿಂದುಗಳ ಜೀವ ರಕ್ಷಣೆಗೆ ಕೊಡಲು ಮುಂದಾಗಬೇಕು. ತಕ್ಷಣವೇ ಇಸ್ಕಾನ್ ಸ್ವಾಮೀಜಿ ಬಿಡುಗಡೆ ಮಾಡಲು ಬಾಂಗ್ಲಾ ಸರ್ಕಾರದ ಮೇಲೆ ಭಾರತ ಸರ್ಕಾರ ಒತ್ತಡ ತರಬೇಕು.
-ಕ್ರಷ್ಣ ಭಟ್
ಕೋಶಾಧ್ಯಕ್ಷರು, ವಿಎಚ್ ಪಿ ಕರ್ನಾಟಕ ಉತ್ತರ