ಬೆಳಗಾವಿ : ಬೆಳಗಾವಿಯ ಕೋಟೆ ಆವರಣದ ರಾಮಕೃಷ್ಣ ಮಿಷನ್ ಆಶ್ರಮದ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವ ಭಾವೈಕ್ಯ ಮಂದಿರದ ಪ್ರತಿಷ್ಠಾಪನೆಯ ಸ್ಮರಣಾರ್ಥ ನಡೆಯುತ್ತಿರುವ 20 ನೇ ವಾರ್ಷಿಕೋತ್ಸವದ ಮೊದಲ ದಿನವಾದ ಶುಕ್ರವಾರ ಯುವ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು.

ಸ್ವಾಮಿ ವಿವೇಕಾನಂದರ ರಾಷ್ಟ್ರಪ್ರೇಮದ ಚಿಂತನೆಗಳ ಅವಶ್ಯಕತೆ ಎಂಬ ವಿಚಾರದ ಮೇಲೆ ಶ್ರೀ ನಿತ್ಯಾನಂದ ವಿವೇಕವಂಶಿ ಮಾತನಾಡಿ, ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ಅಣ್ಣಾ ಹಜಾರೆಯವರ ಜೀವನ ಬದಲಾಯಿಸಿದ್ದೆ ರೈಲ್ವೆ ನಿಲ್ದಾಣದಲ್ಲಿ ಸಿಕ್ಕ ವಿವೇಕಾನಂದರ ಪುಸ್ತಕ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತುಂಗಕ್ಕೇರಲು ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಮಹಾನ್ ಸಾಧನೆ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.

ಬೆಂಗಳೂರಿನ ರಾಮಕೃಷ್ಣ ಮಠದ ಸನ್ಯಾಸಿಗಳಾದ ಪೂಜ್ಯ ಸ್ವಾಮಿ ವೀರೇಶಾನಂದ ಜೀ ಮಹಾರಾಜ ಅವರು ಸ್ವಾಮಿ ವಿವೇಕಾನಂದರ ಮೂರು ಮಂತ್ರಗಳು ಏಕಾಗ್ರತೆ ಆತ್ಮವಿಶ್ವಾಸ ಚಾರಿತ್ರ್ಯ ಎಂಬ ವಿಷಯದ ಕುರಿತು ಮಾತನಾಡಿ ಏಕಾಗ್ರತೆಗೆ ಅಭ್ಯಾಸ, ಆಸಕ್ತಿ ಮುಖ್ಯ,
ಆತ್ಮವಿಶ್ವಾಸಕ್ಕೆ ಶಕ್ತಿಯ ಸಂದೇಶ, ಅಮೃತ ರೂಪದ ಸಂದೇಶ ಮುಖ್ಯ,
ಚಾರಿತ್ರಕ್ಕೆ ಪ್ರಾಮಾಣಿಕತೆ, ಸತ್ಯನಿಷ್ಠೆ ಮತ್ತು ವಿಧೇಯತೆಗಳು ಮುಖ್ಯ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಜೀವನದ ಒಂದು ಕ್ಷಣವನ್ನು ವ್ಯರ್ಥಗೊಳಿಸಕೊಳ್ಳಬಾರದು. ಕುವೆಂಪು ಹೇಳಿದಂತೆ ಸರಳ ಜೀವನ ನಡೆಸಬೇಕು. ತಪಸ್ಸಿನ ಜೀವನ ನಡೆಸಬೇಕು. ಪರೀಕ್ಷೆ ಯಾರೂ ಬೇಕಾದರೂ ಪಾಸ್ ಆಗಬಹುದು. ಆದರೆ ಜ್ಞಾನ ಸಂಪಾದನೆ ಸಾಧ್ಯವಿಲ್ಲ. ಸಕಲ ಜ್ಞಾನ ಸಂಪಾದನೆ ಮಾಡಬೇಕು. ವಿವೇಕಾನಂದರ ಪುಸ್ತಕಗಳು ರಾಷ್ಟ್ರ ಜಾಗೃತಿ ಮೂಡಿಸುತ್ತವೆ. ರಾಷ್ಟ್ರ ಜಾಗೃತಿ ಎಂಬ ಪುಟ್ಟ ಪುಸ್ತಕ ಓದಿದ ಮೇಲೆ ಮೈಸೂರಿನ ವೈದ್ಯ ಬಾಲಸುಬ್ರಮಣ್ಯ ಅವರ ಜೀವನದ ಗತಿಯೇ ಬದಲಾಯಿತು. ವೈದ್ಯಕೀಯ ವೃತ್ತಿಯನ್ನು ತೊರೆದು ಜನಸೇವೆಗೆ ಅವರು ತೊಡಗಿಸಿಕೊಂಡರು.
ವಿದ್ಯಾರ್ಥಿಗಳಿಗೆ ಏಕಾಗ್ರತೆ, ಅಗತ್ಯ. ಏಕಾಗ್ರತೆ ಹೆಚ್ಚು ಇದ್ದರಷ್ಟೇ ಹೆಚ್ಚು ಜ್ಞಾನ ಸಂಪಾದಿಸಬಹುದು. ಪ್ರತಿಯೊಂದು ಕೆಲಸದಲ್ಲೂ ಏಕಾಗ್ರತೆ ಬೇಕು. ಇದು ವಿದ್ಯಾರ್ಥಿಗಳಿಗೆ ವಿವೇಕಾನಂದರ ಸೂತ್ರ. ಏಕಾಗ್ರತೆ ಎಂದರೆ ಮಾನಸಿಕ ಶಕ್ತಿ. ಇದು ಅನಂತ ಶಕ್ತಿ. ಯಾವುದೇ ವಿಷಯದ ಬಗ್ಗೆ ಏಕಾಗ್ರತೆ ಬೆಳೆಸಿಕೊಂಡರೆ ಏನನ್ನೂ ಸಾಧಿಸಲು ಸಾಧ್ಯ.
ನೀವು ಕೇವಲ ಪರೀಕ್ಷೆಗಾಗಿ ಓದಬೇಡಿ. ಜ್ಞಾನಕ್ಕಾಗಿ ಪ್ರೀತಿಯಿಂದ ಓದಿ, ಓದನ್ನು ಸದಾ ಪ್ರೀತಿಸಿ. ಐನ್ ಸ್ಟೈನ್ ದಡ್ಡ. ಆದರೆ ಪ್ರಚಂಡ ಶಕ್ತಿ ಬೆಳೆಸಿಕೊಂಡು ಜಗತ್ತಿನಲ್ಲೇ ಅತ್ಯಂತ ಮೇಧಾವಿ ಎನಿಸಿಕೊಂಡ. ಅಭ್ಯಾಸ, ಆಸಕ್ತಿ ಬೆಳೆಸಿಕೊಳ್ಳಿ. ಮನಸ್ಸು ನಿಯಂತ್ರಣ ಮಾಡಿಕೊಂಡು ಸಾಧನೆ ಪಥದಲ್ಲಿ ಮುನ್ನುಗ್ಗುವಂತೆ ಅವರು ಕರೆ ನೀಡಿದರು.

ಗುಜರಾತಿನ ರಾಜ್ ಕೋಟ್ ರಾಮಕೃಷ್ಣ ಮಿಷನ್ ನ ಅಧ್ಯಕ್ಷ ಪೂಜ್ಯ ಸ್ವಾಮಿ ನಿಖೀಲೇಶ್ವರಾನಂದಜೀ ಮಹಾರಾಜ್ ಅವರು “ಯುವ ವರ್ಗ ಹಾಗೂ ಸ್ವಾಮಿ ವಿವೇಕಾನಂದ” ಎಂಬ ವಿಚಾರದ ಮೇಲೆ ಮಾತನಾಡಿ, ನಮ್ಮ ಮನಸ್ಸು ಎಷ್ಟು ಶುದ್ಧವಾಗಿರುತ್ತೋ ಅಷ್ಟು ನಮ್ಮ ಮನಸ್ಸು ಏಕಾಗ್ರವಾಗಿರುತ್ತದೆ ಹೀಗಾದಾಗ ಮನಸ್ಸಿನ ಏಕಾಗ್ರತೆಯಿಂದ 10 ಗಂಟೆಗಳಲ್ಲಿ ಓದುವುದನ್ನು ಒಂದು ಗಂಟೆಯಲ್ಲಿ ಓದಬಹುದು ಎಂದರು.

ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮಪ್ರಾಣಾನಂದಜೀ ಮಹಾರಾಜ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನು ಆಡಿದರು.

ಕಾರ್ಯಕ್ರಮಕ್ಕೆ ಬೆಳಗಾವಿಯ ವಿವಿಧ ಕಾಲೇಜುಗಳಿಂದ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಿದರು.