ಬೆಳಗಾವಿ : ಗಣೇಶ ಚೌತಿಯಿಂದ ಆರಾಧಿಸಲ್ಪಟ್ಟ ಗಣಪತಿಯನ್ನು ಮಂಗಳವಾರ ಸಂಜೆ ನಗರದ ವಿವಿಧ ಪ್ರದೇಶಗಳಲ್ಲಿ ಶ್ರದ್ಧೆ, ಭಕ್ತಿಗಳಿಂದ ಪೂಜಿಸಿ ವಿಸರ್ಜಿಸಲಾಯಿತು. ಎಲ್ಲಿ ನೋಡಿದರೂ ಗಣಪತಿಗಳನ್ನು ಮೆರವಣಿಗೆ ಮೂಲಕ ಕೊಂಡೊಯ್ಯುತ್ತಿರುವ ದೃಶ್ಯ ಕಂಡು ಬಂತು. ಪಟಾಕಿ, ಸುಡು ಮದ್ದುಗಳು, ಡೋಲು-ಢಮರು, ವಾದ್ಯಗಳ ನಿನಾದಗಳು ಬೆಳಗಾವಿ ಜನತೆಯನ್ನು ಭಕ್ತಿಪರವಶವನ್ನಾಗಿಸಿತು.

ಸ್ವಾತಂತ್ರ್ಯ ಪೂರ್ವದ ಐತಿಹಾಸಿಕ ಪರಂಪರೆ ಹೊಂದಿರುವ ಬೆಳಗಾವಿಯ ಭವ್ಯ ಶ್ರೀ ಗಣೇಶ ವಿಸರ್ಜನೆ ಮೆರವಣಿಗೆ ಮಂಗಳವಾರ ಸಂಜೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆರಂಭಗೊಂಡಿದ್ದು, ಬುಧವಾರ ಸಂಜೆವರೆಗೂ ನಡೆಯುತ್ತದೆ. ಈ ವರ್ಷ ಮಾಳಿಗಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳ ಪ್ರಥಮ ಗಣೇಶ ವಿಸರ್ಜನೆ ಎಂಬ ಗೌರವಕ್ಕೆ ಪಾತ್ರವಾಗಿದೆ.
ಇಂದು ಅನಂತ ಚತುರ್ದಶಿಯಂದು ಬೆಳಗಾವಿ ಶ್ರೀ ಗಣೇಶ ವಿಸರ್ಜನೆ ಮೆರವಣಿಗೆಯು ಸಾಂಪ್ರದಾಯಿಕವಾಗಿ ಆರಂಭವಾಯಿತು. ಮೊದಲಿಗೆ ಮಾಳಿ ಗಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿಯ ಗಣಪತಿಯನ್ನು ಕಪಿಲೇಶ್ವರ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.

ಮಾಳಿಗಲ್ಲಿ ಗಣೇಶ ಮಂಡಳದ ಪದಾಧಿಕಾರಿಗಳು ಹಾಗೂ ನಾಗರಿಕರೊಂದಿಗೆ ಭಕ್ತರು ಸಡಗರ ಸಂಭ್ರಮದಿಂದ ಶ್ರೀ ಗಣೇಶ ಮೂರ್ತಿಯನ್ನು ಕೆರೆಯಲ್ಲಿಗೆ ತಂದರು.

ಮೆರವಣಿಗೆ ಮೂಲಕ ತಂದ ಈ ಮೂರ್ತಿಯ ಮುಂದೆ ಲೋಕಮಾನ್ಯ ತಿಲಕರು ಸಾಮಾಜಿಕ ಸಂದೇಶ ನೀಡುವ ಸನ್ನಿವೇಶ ಪ್ರದರ್ಶಿಸಲಾಯಿತು.

ಮಾಳಿ ಗಲ್ಲಿಯ ಗಣಪತಿಯನ್ನು ಮೊದಲು ಕಪಿಲೇಶ್ವರ ಸರೋವರದಲ್ಲಿ ಮಧ್ಯಾಹ್ನ 3:30 ರ ಸುಮಾರಿಗೆ ಗಣಪತಿ ಬಪ್ಪಾ ಮೋರಯಾ ಮುಂದಿನ ವರ್ಷ ಬೇಗ ಬಾ ಎಂದು ಭಕ್ತಿಯ ವಾತಾವರಣದಲ್ಲಿ ವಿಸರ್ಜನೆ ಮಾಡಲಾಯಿತು.

ಈ ವರ್ಷ ಬೆಳಗಾವಿ ಮಹಾನಗರದಲ್ಲಿ 390ಕ್ಕೂ ಅಧಿಕ ಸಾರ್ವಜನಿಕ ಗಣಪತಿ ಮತ್ತು ಮನೆಗಳಲ್ಲಿ ಇಟ್ಟಿರುವ ಲಕ್ಷಾಂತರ ಗಣಪತಿಗಳನ್ನು ನಗರದ ವಿವಿಧ ಪ್ರದೇಶಗಳ ಗಣೇಶ ವಿಸರ್ಜನೆಯ ತಾಣಗಳಲ್ಲಿ ಭಕ್ತರು ಭಕ್ತಿಯಿಂದ ಪೂಜಿಸಿ ವಿಸರ್ಜಿಸಿದ್ದಾರೆ.

ಸಂಜೆ ಸುಮಾರಿಗೆ ಹುತಾತ್ಮ ಚೌಕದಲ್ಲಿ ಸಾರ್ವಜನಿಕ ಗಣೇಶೋತ್ಸವದ ಭವ್ಯ ಮೆರವಣಿಗೆಗೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ವತಿಯಿಂದ ಚಾಲನೆ ನೀಡಲಾಯಿತು. ಮಂಗಳವಾರ ಬೆಳಗ್ಗೆಯಿಂದಲೇ ವಿವಿಧ ಪ್ರದೇಶಗಳ ಮನೆಗಳಲ್ಲಿ ಇಟ್ಟಿದ್ದ ಗಣಪತಿಗಳನ್ನು ವಿಸರ್ಜಿಸಲಾಯಿತು. ಸಂಜೆಯಾಗುತ್ತಿದ್ದಂತೆ ನಗರದ ಪ್ರಮುಖ ಬೀದಿಗಳು ಹಾಗೂ ಗಣಪತಿ ವಿಸರ್ಜನೆಯ ತಾಣಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನಜಂಗುಳಿ ಕಂಡುಬಂತು. ಕಾಲೇಜು ರಸ್ತೆ ಹಾಗೂ ಧರ್ಮವೀರ ಸಂಭಾಜಿಚೌಕದಲ್ಲಿ ವಿಶೇಷ ಗ್ಯಾಲರಿ ನಿರ್ಮಿಸುವ ಮೂಲಕ ಸಾರ್ವಜನಿಕರಿಗೆ ಗಣಪತಿ ಮೆರವಣಿಗೆ ದೃಶ್ಯ ಸವಿಯಲು ಅವಕಾಶ ಮಾಡಿಕೊಡಲಾಗಿದೆ. ಸ್ಥಳೀಯ ದೃಶ್ಯ ಮಾಧ್ಯಮಗಳು ನೇರ ಪ್ರಸಾರದ ಮೂಲಕ ಗಣೇಶೋತ್ಸವವನ್ನು ಮನೆಯಲ್ಲೇ ನೋಡುವ ಆಕಾಶವನ್ನು ಈ ವರ್ಷವೂ ಸಹ ಕಲ್ಪಿಸಿಕೊಟ್ಟಿವೆ.