ಬೆಳಗಾವಿ :
ಬೆಳಗಾವಿ ಮಹಾನಗರ ಪಾಲಿಕೆಯ ಅತ್ಯಂತ ಮಹತ್ವದ ಬಜೆಟ್ ಇಂದು ಮಂಡನೆ ಆಗಿದೆ. ಬೆಂಗಳೂರು ಬಿಟ್ಟರೆ ರಾಜ್ಯದ ಅತ್ಯಂತ ದೊಡ್ಡ ಮಹಾನಗರ ಹಾಗೂ ಎರಡನೇ ರಾಜಧಾನಿ ಎಂದೇ ಗುರುತಿಸಲ್ಪಡುತ್ತಿರುವ ಬೆಳಗಾವಿ ಅಭಿವೃದ್ಧಿ ದೃಷ್ಟಿಯಿಂದ ಹತ್ತು ಹಲವು ಯೋಜನೆಗಳು ಕಾರ್ಯಗತವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿರುವ ಮಹಾನಗರ ಪಾಲಿಕೆ ತನ್ನ ಪ್ರಸಕ್ತ ವರ್ಷದ ಬಜೆಟ್ ಮಂಡಿಸಿದೆ.
ಮಹಾನಗರ ಪಾಲಿಕೆಯ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾಜನ ವಿಜಾಪುರೆ ಅವರು ಪಾಲಿಕೆಯ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯ ಬಜೆಟ್ ಗಾತ್ರ, 436 ಕೋಟಿ 53.63 ಲಕ್ಷ ರೂ. ಮೊತ್ತದ ಉಳಿತಾಯದ ಬಜೆಟ್ ಮಂಡಿಸಿದ್ದು ವಿರೋಧ ಪಕ್ಷದ ನಗರ ಸೇವಕರ ಗದ್ದಲ ಗಲಾಟೆಯ ನಡುವೆ ಮೇಯರ್ ಸವಿತಾ ಕಾಂಬಳೆ ಅವರು ಬಜೆಟ್ ಗೆ ಅನುಮೋದನೆ ನೀಡಿದ್ದಾರೆ.ಬಜೆಟ್ ಪೂರ್ವದಲ್ಲಿ ವಿರೋಧ ಪಕ್ಷದ ನಗರ ಸೇವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಬಜೆಟ್ ಮಂಡನೆಯ ಸಮಯದಲ್ಲಿ ವಿರೋಧ ಪಕ್ಷದವರು ಗದ್ದಲ ಮಾಡಿದ ಪ್ರಸಂಗ ನಡೆಯಿತು.
ಪ್ರಸಕ್ತ ವರ್ಷದಲ್ಲಿ 436 ಕೋಟಿ 53.63 ಲಕ್ಷ ರೂ. ಅಂದಾಜು ವೆಚ್ಛ ಭರಿಸಲು ನಿರೀಕ್ಷಿಸಲಾಗಿದೆ. ಅದೇ ರೀತಿ 7.72 ಲಕ್ಷ ರೂ. ಉಳಿತಾಯ ಆಯವ್ಯಯ ಮಂಡಿಸಲಾಗಿದೆ. ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುವ ಎಸ್.ಎಫ್.ಸಿ. ವೇತನ ಅನುದಾನವನ್ನು ಅಧಿಕಾರಿ/ಸಿಬ್ಬಂದಿಗಳ ವೇತನಕ್ಕೆ ಬಳಕೆ,ಬೆಳಗಾವಿ ನಗರ ಸ್ವಚ್ಛವಾಗಿಡಲು ಹೊರ ಗುತ್ತಿಗೆ ಸ್ವಚ್ಛತಾ ವೆಚ್ಚಕ್ಕಾಗಿ 28 ಕೋಟಿ. ರೂ. ಮೀಸಲಿಡಲಾಗಿದೆ.ನೇರ ನೇಮಕಾತಿ ಹೊಂದಿದ ಪೌರ ಕಾರ್ಮಿಕರ ವೇತನಕ್ಕಾಗಿ 18 ಕೋಟಿ ರೂ. ಕಾಯ್ದಿರಿಸಲಾಗಿದೆ.ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿಗೆ 4 ಕೋಟಿ ನೀಡಲಾಗಿದ್ದು ಬೀದಿ ದೀಪಗಳ ನಿರ್ವಹಣೆಗೆ 2.5 ಕೋಟಿ ಅನುದಾನ ಮೀಸಲಿದೆ.
ರಸ್ತೆ, ಚರಂಡಿ, ಪಾದಾಚಾರಿ, ಮಳೆ ನೀರು ನಿರ್ವಹಣೆ, ರಸ್ತೆಗಳ ಮಾರ್ಗಸೂಚಿ ಅಳವಡಿಸಲು 10.5 ಕೋಟಿ ನಿಗದಿ ಪಡಿಸಲಾಗಿದೆ.ಬೀದಿ ನಾಯಿಗಳ ನಿರ್ವಹಣೆಗೆ 1.10 ಕೋಟಿ ನಿಗದಿಯಾಗಿದೆ.
ಈ ಬಜೆಟ್ ವಿಶೇಷತೆ ಏನೆಂದರೆ, ಬೆಳಗಾವಿ ಮಹಾನಗರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 25 ಲಕ್ಷ ರೂ ನಿಗದಿ ಮಾಡಲಾಗಿದ್ದು,ನಗರ ಸೇವಕರ ಅಧ್ಯಯನ ಪ್ರವಾಸಕ್ಕಾಗಿ 30 ಲಕ್ಷ ಮೀಸಲಿಡಲಾಗಿದೆ. ಮಹಾನಗರ ಪಾಲಿಕೆ ಬೆಳಗಾವಿ ನಗರದಲ್ಲಿ ಕುಡಿಯುವ ನೀರು ಸರಬರಾಜು, ತೆರೆದ ಭಾವಿಗಳ ಅಭಿವೃದ್ಧಿಗೆ ಕೇವಲ 25 ಲಕ್ಷ ನಿಗದಿಪಡಿಸಲಾಗಿದೆ. ಭಾವಿಗಳ ಅಭಿವೃದ್ಧಿಗಿಂತ ಇವರಿಗೆ ಅಧ್ಯಯನ ಪ್ರವಾಸಕ್ಕೆ ಹೆಚ್ಚು ಅನುದಾನ ನಿಗದಿಯಾಗಿದೆ.
ಬೆಳಗಾವಿ ಮಹಾನಗರದಲ್ಲಿ ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆಗಾಗಿ ಕೋಟಿ,ಕೋಟಿ ಹಣ ಖರ್ಚಾದರೂ ಸಹ ಬೀದಿ ನಾಯಿಗಳ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಲೇ ಇದೆ. ಈ ವರ್ಷದ ಬಜೆಟ್ ನಲ್ಲಿ ಬೀದಿ ನಾಯಿಗಳ ನಿರ್ವಹಣೆಗಾಗಿ ಒಂದು ಕೋಟಿ ಹತ್ತು ಲಕ್ಷ ರೂ ನಿಗದಿ ಮಾಡಲಾಗಿದೆ.