ಬೆಳಗಾವಿ : ಬೆಳಗಾವಿಯಲ್ಲಿ ಶತಮಾನದ ಹಿಂದೆ ನಡೆದ 39ನೇ ಕಾಂಗ್ರೆಸ್ ಮಹಾ ಅಧಿವೇಶನದ ಸವಿನೆನಪಿನಲ್ಲಿ ಇದೀಗ ಇಡೀ ನಗರಿಯನ್ನು ವಿದ್ಯುತ್ ದೀಪಗಳಿಂದ ಶೃಂಗಾರಗೊಳಿಸಲಾಗಿದೆ. ಬೆಳಗಾವಿ ಮಹಾನಗರಿ ಮದುವಣಗಿತ್ತಿಯಂತೆ ಶೋಭಾಯಮಾನಗೊಂಡಿದೆ.

ಸಾಮಾಜಿಕ ಜಾಲತಾಣದಲ್ಲಿ ಈಗ ಬೆಳಗಾವಿ ಮಹಾನಗರದ ಅಲಂಕಾರ ವೈರಲ್ ಆಗಿದೆ. ಬೆಳಗಾವಿ ನಗರದಲ್ಲಿ ಸುಮಾರು 90 ವೃತ್ತಗಳಲ್ಲಿ ಅಂದಾಜು 2 ಲಕ್ಷಕ್ಕೂ ಅಧಿಕ ಎಲ್ಇಡಿ ಸೇರಿದಂತೆ ಅತ್ಯಾಧುನಿಕ ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿದೆ. ಕೇವಲ ದೀಪಾಲಂಕಾರಕ್ಕೆ ಎಂಟು ಕೋಟಿಗಳನ್ನು ರಾಜ್ಯ ಸರಕಾರ ಖರ್ಚು ಮಾಡುತ್ತಿದೆ.

ರಾತ್ರಿಯಿಡೀ ಈ ದೀಪಗಳು ಬೆಳಗಾವಿಯನ್ನು ಬೆಳಗುತ್ತಿವೆ. ಯುವ ಸಮುದಾಯ ಹಾಗೂ ಕಾಲೇಜು ಯುವಕ- ಯುವತಿಯರು ಶೋಭಿಸುತ್ತಿರುವ ಬೆಳಗಾವಿಯ ಚಿತ್ರಣದೊಂದಿಗೆ ತಮ್ಮ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಪುಳಕಿತಗೊಳ್ಳುತ್ತಿದ್ದಾರೆ.

ಮಹಾಪುರುಷರಾದ ಜಗಜ್ಯೋತಿ ಬಸವಣ್ಣ, ವೀರರಾಣಿ ಚನ್ನಮ್ಮ, ಛತ್ರಪತಿ ಶಿವಾಜಿ ಮಹಾರಾಜರು, ಸಂಗೊಳ್ಳಿ ರಾಯಣ್ಣ, ಗೌತಮ ಬುದ್ಧ, ಭಕ್ತ ಕನಕದಾಸರು ಸೇರಿದಂತೆ ಇತರ ನಾಯಕರ ಸುಂದರ ಚಿತ್ರಗಳು ಅಲ್ಲಲ್ಲಿ ಅನಾವರಣಗೊಂಡು ಕಂಗೊಳಿಸುತ್ತಿವೆ.

ಒಟ್ಟಾರೆ, ಇದೀಗ ಕಾಂಗ್ರೆಸ್ ಮಹಾ ಅಧಿವೇಶನದ ಶತಮಾನೋತ್ಸವದ ಸವಿನೆನಪಿನಲ್ಲಿ ಬೆಳಗಾವಿ ನಗರ ಮೈಸೂರು ದಸರಾದಂತೆ ಕಂಗೊಳಿಸುತ್ತಿದೆ. ಇತ್ತೀಚಿಗಷ್ಟೇ ನಡೆದ ವಿಧಾನ ಮಂಡಲದ ಅಧಿವೇಶನದ ಬೆನ್ನಿಗೆ ಈಗ ನಡೆಯುತ್ತಿರುವ ಶತಮಾನೋತ್ಸವದ ಈ ಸಂಭ್ರಮ ಬೆಳಗಾವಿ ಜನತೆಯಲ್ಲಿ ನವೋತ್ಸವಕ್ಕೆ ಕಾರಣವಾಗಿದೆ.