ಕಾಗವಾಡ-

ಬೆಳಗಾವಿ ಜಿಲ್ಲೆ, ಕಾಗವಾಡ ತಾಲೂಕು, ಐನಾಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ನಮ್ದೇ ಸಾಹಿತ್ಯ ಸಂಘ’ ದ ವತಿಯಿಂದ ‘ನಮ್ದೇ ಜನ : ನಮ್ದೇ ಪದ: ಜಾನಪದ ಗೀತ ಗಾಯನ ಕಾರ್ಯಕ್ರಮ’ವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಕೌಲುಗುಡ್ಡದ ಭಾಗವ್ವ ಮಲ್ಲಪ್ಪ ಹನುಮರೆಡ್ಡಿ ಆಯಿ ಇವರು ಆಗಮಿಸಿದ್ದರು. ಚಿಕ್ಕವಯಸ್ಸಿನಿಂದ ಜನಪದ ಸಾಹಿತ್ಯವನ್ನು ನಾಲಿಗೆ ಮೇಲೆ ನುಡಿಯುತ್ತಾ, 62 ವರ್ಷದ ಭಾಗವ್ವ ಆಯಿ , ಬೀಸುಕಲ್ಲಿನ ಹಾಡುಗಳು, ಹಂತಿ ಹಾಡುಗಳು, ಭಜನೆ ಹಾಡುಗಳು, ಪಂಚಮಿ ಹಾಡು ಮತ್ತು ಮೋದಿಯನ್ನು ಕುರಿತು ತಾವೇ ಕಟ್ಟಿದ ಮೋದಿ ಗೀತೆಯನ್ನು ಕೂಡ ತಮ್ಮ ಕಂಚಿನ ಕಂಠದಿಂದ ಹಾಡಿ ಉನ್ಮಾದಗೊಳಿಸಿದರು.

ಬಡತನದಲ್ಲಿ ಹುಟ್ಟಿ ಹಲವಾರು ಕಷ್ಟ ನಷ್ಟಗಳನ್ನು ಅನುಭವಿಸಿ ಬೆಳೆದರೂ ಪದವನ್ನು ನಾನು ಆತ್ಮ ಸಾತ್ ಮಾಡಿಕೊಂಡಿದ್ದೇನೆ. ಹಾಗಾಗಿ ಯಾವ ಸಂದರ್ಭದಲ್ಲಿ ಬೇಕಾದರೂ ನಾನು ಪದವನ್ನು ಕಟ್ಟಿ ಹಾಡಬಲ್ಲಂತಹ ಶಕ್ತಿ ಆ ಪರಮಾತ್ಮ ಮಲ್ಲೇಶ್ವರ ನನಗೆ ಕರುಣಿಸಿದ್ದಾನೆ. ಅದನ್ನು ಕೊನೆವರೆಗೂ ಕಾಯ್ದುಕೊಂಡು ಬರಲಿ ಎಂದು ಹೇಳುತ್ತಾ ತಮ್ಮ ಬಾಲ್ಯ ಮತ್ತು ಹಾಡುಗಳನ್ನು ಹೆಣೆಯುವ ಕಲೆಯ ಹಿನ್ನೆಲೆಯ ಬಗ್ಗೆ ಭಾಗವ್ವ ಆಯಿ ಮೆಲುಕುಹಾಕಿದರು.

ಇಂದಿನ ಯುಗದಲ್ಲಿ ವಿದ್ಯಾರ್ಥಿಗಳು ಮೊಬೈಲಿನ ಹುಚ್ಚಿಗೆ ಮರುಳಾಗಿ ಅವರಲ್ಲಿರುವಂತಹ ನಿಜವಾದ ಸೃಜನಶೀಲತೆಯನ್ನು ಮರೆಯುತ್ತಿದ್ದಾರೆ. ಮೊಬೈಲ್ ಅನ್ನು ಎಷ್ಟು ಬೇಕೋ ಅಷ್ಟು ಬಳಸಿ ನಿಮ್ಮಲ್ಲಿರುವ ಆಲೋಚನಾ ಶಕ್ತಿ, ವಿವೇಚನಾ ಶಕ್ತಿ ಮತ್ತು ಪದ ಕಟ್ಟಿ ಹಾಡುವ ಕಲೆಯನ್ನು ಬೆಳೆಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನೂ ಹೇಳಿದರು. ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ತಮ್ಮ ಅಭ್ಯಾಸವನ್ನು ನಿರ್ವಹಿಸಿ ಕಾಲೇಜಿಗೆ, ಗುರುಗಳಿಗೆ ಮತ್ತು ಹೆತ್ತ ತಂದೆ-ತಾಯಿಗಳಿಗೆ ಉತ್ತಮವಾದ ಹೆಸರು-ಕೀರ್ತಿಯನ್ನು ತಂದು ಕೊಡಲಿ ಎಂದು ಈ ಸಂದರ್ಭದಲ್ಲಿ ಹಾರೈಸಿದರು.

ಇದೇ ಸಂಧರ್ಭದಲ್ಲಿ ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕರಾದ ಪ್ರೊ. ಬಾದಶಾಹ ಗಡ್ಕರಿ ಮತ್ತು ವಿದ್ಯಾರ್ಥಿಗಳು ಜನಪದ ಗೀತೆಗಳನ್ನಾಡಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗುತಂದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಬಿ. ಆರ್. ಮುಗ್ಗನವರ್ ಇವರು ಜಾನಪದ ಸಾಹಿತ್ಯ, ಅದರ ವೈಶಿಷ್ಟ್ಯತೆಗಳ ಕುರಿತು ಮಾತನಾಡುತ್ತಾ, ಜಾನಪದ ಒಡಪುಗಳನ್ನು ಉದಾಹರಿಸಿ, ಅವರಲ್ಲಡಗಿರುವ ಸಾಹಿತ್ಯಾತ್ಮಕಜ್ಞಾನದಿಂದ ಎಲ್ಲರ ಗಮನಸೆಳೆದರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ.ಎನ್. ಕೆ.ಮಾoಗ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು ಅಧ್ಯಕ್ಷರ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಭಾಷಾ ವಿಭಾಗದ ಆಧ್ಯಾಪಕರುಗಳಾದ ಪ್ರೊ. ಜೀವoದರ ಕೇತಪ್ಪನವರ್, ಭಾಗ್ಯಶ್ರೀ ಎಂ. ಎಸ್., ಪದ್ಮಶ್ರೀ ಎಂ., ಹಾಗು ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ವಿದ್ಯಾರ್ಥಿನಿ ಸೌಂದರ್ಯ ಗಾಣಿಗೇರ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಭಾಗವ್ವ ಆಯಿಯವರಿಗೆ ಗೌರವ ಸಮರ್ಪಣೆ ಹಾಗೂ ಸನ್ಮಾನವನ್ನು ಏರ್ಪಡಿಸಲಾಯಿತು.