ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಸಹೋದರರು ಮತ್ತೆ ಪಾರಮ್ಯ ಮೆರೆದಿದ್ದಾರೆ.
ರಾಜ್ಯದ ಪ್ರಭಾವಿ ರಾಜಕೀಯ ಕುಟುಂಬಗಳಲ್ಲಿ ಜಾರಕಿಹೊಳಿ ಕುಟುಂಬವೂ ಒಂದು. ರಮೇಶ ಜಾರಕಿಹೊಳಿ ಬದ್ಧ ವೈರಿ ಲಕ್ಷ್ಮೀ ಹೆಬ್ಬಾಳ್ಳರ್‌ಗೆ ಶಾಕ್ ನೀಡಲು ಸೈಲೆಂಟ್ ಆಗಿಯೇ ರಣತಂತ್ರ ಹೆಣದಿದ್ದ ಜಾರಕಿಹೊಳಿ ಸಹೋದರರು, ಜಗದೀಶ ಶೆಟ್ಟರ್ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಧಾನಸಭಾ ಚುನಾವಣೆಯಿಂದ ಸೇಡು ತೀರಿಸಿಕೊಳ್ಳಲು ಕಾದು ಕುಳಿತಿದ್ದ ರಮೇಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ ಪುತ್ರ ಮೃಣಾಲ್ ಹೆಬ್ಬಾಳ್ಳರ್‌ನನ್ನು ಸೋಲಿಸುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ. ಒಟ್ಟಾರೆ ಬೆಳಗಾವಿ ಜಿಲ್ಲೆಯಲ್ಲಿ ಈ ಸಲವೂ ತಾವು ನಿರ್ಣಾಯಕರು ಎಂದು ಮತ್ತೆ ಸಾಬೀತು ಮಾಡಿದ್ದಾರೆ.

ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಗೆಲುವಿನಲ್ಲಿ ರಮೇಶ್ ಜಾರಕಿಹೊಳಿ ಬಹು ಮುಖ್ಯ ಪಾತ್ರ ವಹಿಸಿದ್ದಾರೆ. ಅವರ ಜೊತೆಗೆ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಸಹಾ ಪ್ರಮುಖ ಪಾತ್ರ ವಹಿಸಿದ್ದು ಇಬ್ಬರು ತಮ್ಮ ಮತ ಕ್ಷೇತ್ರಗಳಲ್ಲಿ ಬಿಜೆಪಿಗೆ ದೊಡ್ಡ ಅಂತರದಿಂದ ಲೀಡ್ ತಂದುಕೊಟ್ಟಿದ್ದಾರೆ. ಈ ಮೂಲಕವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರಿಗೆ ಸೋಲುಣಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ತಮ್ಮ ಪುತ್ರಿ ಪ್ರಿಯಾಂಕಾ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಇತ್ತ ಬೆಳಗಾವಿಯಲ್ಲಿ ರಮೇಶ್ ಮತ್ತು ಬಾಲಚಂದ್ರ ಅವರು ಜಗದೀಶ್ ಶೆಟ್ಟರ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೊನೆಗೂ ಬಿಗ್ ಶಾಕ್ ನೀಡಿದ್ದಾರೆ.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹೆಬ್ಬಾಳ್ಕರ್ ಅವರನ್ನು ಸೋಲಿಸಲು ರಮೇಶ
ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಲ್ಲೇ ಸಂಚರಿಸಿ ತಮ್ಮ ಬೆಂಬಲಿಗನಿಗೆ ಬಿಜೆಪಿ ಟಿಕೆಟ್ ನೀಡಿ ತೀವ್ರ ಕಸರತ್ತು ನಡೆಸಿದ್ದರು. ಆದರೂ ಹೆಬ್ಬಾಳ್ಕರ್ ಅವರನ್ನು ಸೋಲಿಸಲು ಯಶಸ್ವಿಯಾಗಿರಲಿಲ್ಲ. ಆದರೆ ಲೋಕಸಭಾ ಚುನಾವಣೆಯಲ್ಲಿ ಹೆಬ್ಬಾಳ್ಕರ್ ಪುತ್ರನಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಅವಕಾಶಕ್ಕೆ ಕಾದು ಕುಳಿತಿದ್ದ ರಮೇಶ್ ಅವರು ಶೆಟ್ಟರ್ ಅವರ ಗೆಲುವಿಗೆ ಶ್ರೇಷ್ಠ ಕೊಡುಗೆ ನೀಡುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ. ಗೋಕಾಕ್ ವಿಧಾನಸಭಾ ಮತಕ್ಷೇತ್ರದಲ್ಲಿ ಬಿಜೆಪಿ 24,000 ಮತ್ತು ಅರಭಾವಿ ಕ್ಷೇತ್ರದಲ್ಲಿ 21 ಸಾವಿರ ಮತಗಳ ಲೀಡ್ ಪಡೆದುಕೊಂಡಿದೆ.

ರಮೇಶ್ ಹಾಗೂ ಬಾಲಚಂದ್ರ ಅವರ ಈ ಲೀಡ್ ನಿಂದ ಬಿಜೆಪಿ ಸುಲಭಸಾಧ್ಯವಾಗಿ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳುವ ಮೂಲಕ ತಮ್ಮ ವಿರೋಧಿಯನ್ನು ಸದೆಬಡಿಯಲು ಯಶಸ್ವಿ ಆಗಿರುವುದು ಇತಿಹಾಸವಾಗಿದೆ.