ಬೆಳಗಾವಿ : ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರ ಶಾಪದಿಂದ ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷ ಸೋಲು ಅನುಭವಿಸಿದೆ ಎಂದು ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ.

ಮತ ಎಣಿಕೆ ಕೇಂದ್ರದಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಗಿ ಶುಭಾಶಯ ಕೋರಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಜಗದೀಶ್ ಶೆಟ್ಟರ್ ಅವರ ಗೆಲುವು ಬಿಜೆಪಿಯ ಸಾಮಾನ್ಯ ಕಾರ್ಯಕರ್ತನ ಗೆಲುವಾಗಿದೆ. ಆದರೆ ಬೆಳಗಾವಿಯಲ್ಲಿ ಈ ಬಾರಿ ಕಾಂಗ್ರೆಸ್ ಸೋಲಲು ಅಂಗನವಾಡಿ ಕಾರ್ಯಕರ್ತೆಯರ ಶಾಪವೇ ಪ್ರಮುಖ ಕಾರಣ ಎಂದು ಅವರು ಬೊಟ್ಟು ಮಾಡಿದರು.

ಪ್ರತಿಯೊಬ್ಬ ಅಂಗನವಾಡಿ ಕಾರ್ಯಕರ್ತೆಯರಿಂದ ಒಂದು ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ. ಅವರ ಶಾಪದಿಂದ ಕಾಂಗ್ರೆಸ್ ಅಭ್ಯರ್ಥಿಗೆ ಸೋಲಾಗಿದೆ. ಬೆಂಗಳೂರು ಮಹಾನಾಯಕರ ಅಹಂಕಾರದಿಂದ ಸಹ ಸೋಲು ಉಂಟಾಗಿದೆ. ದುಡ್ಡು ಹಾಗೂ ಸೊಕ್ಕಿನ ವಿರುದ್ಧ ನನ್ನ ಹೋರಾಟ ಎಂದ ಅವರು, ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದ ನಂತರ ಸ್ವಂತ ಹಣ ಖರ್ಚು ಮಾಡಿ ಕಾರ್ಯಕರ್ತರು ಅವರ ಗೆಲುವಿಗೆ ದುಡಿದಿದ್ದರು. ಆದರೆ ಅಹಂಕಾರದಿಂದ ಬಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಕ್ಷೇತ್ರದ ಜನ ಸೋಲಿಸಿದ್ದಾರೆ ಎಂದು ಪರೋಕ್ಷವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದರು.