ಬೆಂಗಳೂರು :
ನದಿಗಳು ಎಲ್ಲೇ ಹುಟ್ಟಿದರೂ ಸಮುದ್ರಕ್ಕೇ ಸೇರುತ್ತವೆ. ಅದೇ ರೀತಿ ಬೇರೆ ಪಕ್ಷಗಳ ನಾಯಕರು ಇಂದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಬಿಜೆಪಿ ಹಾಗೂ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದ ಜಯಪ್ರಕಾಶ್ ಹೆಗ್ಡೆ, ಸುಕುಮಾರ ಶೆಟ್ಟಿ, ಎಂ.ಪಿ ಕುಮಾರಸ್ವಾಮಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಪಕ್ಷದ ಬಾವುಟ ನೀಡಿ ಸ್ವಾಗತಿಸಿ, ಮಾತನಾಡಿದರು. ಒಟ್ಟಾರೆ ಅವರು ಹೇಳಿದ್ದಿಷ್ಟು:

ಕಾಂಗ್ರೆಸ್ ಪಕ್ಷ ಮಾನಸ ಸರೋವರ ಇದ್ದಂತೆ. ನಾನು ಈಗಷ್ಟೇ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವವರಿಗೆ ತ್ರಿವರ್ಣ ಧ್ವಜ ಹಾಗೂ ಶಾಲು ಕೊಟ್ಟಿದ್ದೇವೆ. ಬೇರೆ ಪಕ್ಷದವರಿಗೆ ಈ ಭಾಗ್ಯವಿಲ್ಲ. ಕಾಂಗ್ರೆಸ್ ಪಕ್ಷದವರಿಗೆ ಮಾತ್ರ ತ್ರಿವರ್ಣ ಧ್ವಜವನ್ನು ಮೈಮೇಲೆ ಹಾಕಿಕೊಳ್ಳುವ ಭಾಗ್ಯವಿದೆ.

ಸಧ್ಯದಲ್ಲೇ ಲೋಕಸಭೆ ಚುನಾವಣೆ ಎದುರಾಗುತ್ತಿದ್ದು, ಬಿಜೆಪಿಯವರು 370 ಕ್ಷೇತ್ರಗಳನ್ನು ಗೆಲ್ಲುವ ಬಗ್ಗೆ ಮಾತನಾಡುತ್ತಿದ್ದಾರೆ. ಹೀಗೆ ಹೇಳುತ್ತಿರುವವರು ಬಿಜೆಪಿ ದೇಶದೆಲ್ಲೆಡೆ ಬೇರೆ ಪಕ್ಷಗಳಿಂದ ನಾಯಕರನ್ನು ಹುಡುಕಿ ಹುಡುಕಿ ತಮ್ಮ ಪಕ್ಷಕ್ಕೆ ಸೆಳೆಯುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತೇವೆ ಎಂದು ಹೇಳುತ್ತಿದ್ದಾರೆ.

ಎರಡು ಮೂರು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿ ಪಟ್ಟಿ ಬಿಡುಗಡೆಯಾಗಲಿದ್ದು, ಕನಿಷ್ಠ 10 ಲೋಕಸಭೆ ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಟಿಕೆಟ್ ತಪ್ಪಿಸಲಿದ್ದಾರೆ. ಕಾರಣ, ಇವರ ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ಎದ್ದಿದೆ. ಈ ಸಂಸತ್ ಸದಸ್ಯರು ಜನರಿಗೆ ಸ್ಪಂದನೆ ನೀಡುತ್ತಿಲ್ಲ. ಈ ಬಾರಿ ಇವರು ಸೋಲುತ್ತಾರೆ ಎಂಬ ಕಾರಣಕ್ಕೆ ಬೇರೆಯವರಿಗೆ ಟಿಕೆಟ್ ನೀಡಲು ಮುಂದಾಗಿದ್ದಾರೆ.

ಕಾಂಗ್ರೆಸ್ ಪಕ್ಷ ಎಷ್ಟು ಗಟ್ಟಿಯಾಗಿದೆ, ಕಾಂಗ್ರೆಸ್ ಪಕ್ಷ ಸೋಲಿಸಲು ಸಾಧ್ಯವಿಲ್ಲ ಎಂಬುದು ಇದರಿಂದ ಅರ್ಥವಾಗುತ್ತದೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಾರೆ. ಅವರು ಇನ್ನು ಎಷ್ಟು ಮೈತ್ರಿ ಬೇಕಾದರೂ ಮಾಡಿಕೊಳ್ಳಲಿ. ನಾವು ನುಡಿದಂತೆ ನಡೆದಿದ್ದೇವೆ. ಚುನಾವಣೆಗೂ ಮುನ್ನ ಪ್ರಿಯಾಂಕಾ ಗಾಂಧಿ ಅವರ ಸಮ್ಮುಖದಲ್ಲಿ ನಾನು, ಸಿದ್ದರಾಮಯ್ಯ ಅವರು ಗ್ಯಾರಂಟಿ ಚೆಕ್ ಗೆ ಸಹಿ ಹಾಕಿದ್ದೆವು. ನಾವು ಅದರಂತೆ ಎಲ್ಲಾ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ದೇಶದಲ್ಲೇ ಇತಿಹಾಸ ಸೃಷ್ಟಿಸಿದ್ದೇವೆ.

ಎಲ್ಲಾ ಕಾರ್ಯಕರ್ತರನ್ನು ಸೇರಿಸಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 15 ಕಾರ್ಯಕರ್ತರನ್ನು ಒಳಗೊಂಡ ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆ ಮಾಡಿ ಅಧಿಕಾರ ನೀಡಲಾಗಿದೆ. ಆಮೂಲಕ ಕಾರ್ಯಕರ್ತರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಶಕ್ತಿ ತುಂಬಿದ ಸರ್ಕಾರ ಮತ್ತೊಂದಿಲ್ಲ.

ಜಯಪ್ರಕಾಶ್ ಹೆಗ್ಡೆ, ಸುಕುಮಾರ ಶೆಟ್ಟಿ ಹಾಗೂ ಕುಮಾರಸ್ವಾಮಿ ಅವರು ಇಂದು ಪಕ್ಷ ಸೇರಿದ್ದಾರೆ. ಇದೇ ರೀತಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಬೇರೆ ಪಕ್ಷಗಳ ನಾಯಕರು ಹಾಗೂ ಮುಖಂಡರನ್ನು ಪಕ್ಷ ಸೇರಿಸಿಕೊಳ್ಳಲು ಸ್ಥಳೀಯ ನಾಯಕರಿಗೆ ಕರೆ ನೀಡಿದ್ದಾನೆ. ನಮ್ಮ ಪಕ್ಷದ ಸಿದ್ಧಾಂತ ಹಾಗೂ ನಾಯಕತ್ವ ನಂಬಿ ಬರುತ್ತಿರುವ ಎಲ್ಲರಿಗೂ ಪಕ್ಷಕ್ಕೆ ಸ್ವಾಗತ.

ಕಾಂಗ್ರೆಸ್ ಪಕ್ಷ ಮಾತ್ರ ದೇಶದಲ್ಲಿ ಎಲ್ಲಾ ವರ್ಗದವರನ್ನು ಸಮಾನವಾಗಿ ತೆಗೆದುಕೊಂಡು ಹೋಗಲಿದೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದ ಜನ ಅಧಿಕಾರಕ್ಕೆ ಬಂದಂತೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ನಮ್ಮನ್ನು ದೆಹಲಿಗೆ ಕರೆದು ಚರ್ಚೆ ಮಾಡಬಹುದು.

ನಾನು ಇಂದು ಬೇಷರತ್ತಾಗಿ ನಾಯಕರನ್ನು ಪಕ್ಷಕ್ಕೆ ಕರೆತಂದಿದ್ದು, ಯಾರಿಗೂ ಟಿಕೆಟ್ ನೀಡುವ ಭರವಸೆ ನೀಡಿಲ್ಲ. ಹಳಬರು ಹೊಸಬರು ಎಂಬ ವ್ಯತ್ಯಾಸ ಇಲ್ಲದೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಿಕೊಂಡು ಹೋಗಿ. ಎಲ್ಲರಿಗೂ ಅರ್ಹತೆಗೆ ತಕ್ಕಂತೆ ಅಧಿಕಾರ ಸಿಗಲಿದೆ. ಯಾರೂ ಗಾಬರಿಯಾಗುವ ಅಗತ್ಯವಿಲ್ಲ. ಎಲ್ಲರೂ ಒಟ್ಟಾಗಿ ಪಕ್ಷ ಸಂಘಟನೆ ಮಾಡಬೇಕು.