ಚೆನ್ನೈ: ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಹಾಗೂ ಖ್ಯಾತ ನಟಿ ಖುಷ್ಬು ಸುಂದರ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಜೂನ್ 28 ರಿಂದ ಜಾರಿಗೆ ಬರುವಂತೆ ನಟಿ ಖುಷ್ಬು ಅವರ ರಾಜೀನಾಮೆಯನ್ನು ಅಂಗೀಕರಿಸಿದೆ.

ಇದು ಹಠಾತ್ ನಿರ್ಧಾರವಲ್ಲ. ನಾನು ಅದರ ಬಗ್ಗೆ ಸ್ವಲ್ಪ ಸಮಯ ಯೋಚಿಸಿದೆ ಮತ್ತು ನಾನು ಒಂದು ತಿಂಗಳ ಹಿಂದೆ ನನ್ನ ರಾಜೀನಾಮೆಯನ್ನು ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

 

ರಾಷ್ಟ್ರೀಯ ಮಹಿಳಾ ಆಯೋಗದ (NCW) ಸದಸ್ಯರಾದ ನಂತರ ರಾಜಕೀಯವಾಗಿ ಕೆಲಸ ಮಾಡಲು ಅಥವಾ ಯಾವುದೇ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ನಾನು ರಾಜಕೀಯವಾಗಿ ಒಲವು ಹೊಂದಿರುವ ವ್ಯಕ್ತಿ, ಹೀಗಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.

ತನ್ನ ಜೀವನದ 14 ವರ್ಷಗಳನ್ನು ರಾಜಕೀಯಕ್ಕೆ ನೀಡಿದ್ದೇನೆ. ನಾನು ಸಕ್ರಿಯ ರಾಜಕೀಯಕ್ಕೆ ಮರಳುವುದನ್ನು ಬಯಸುತ್ತೇನೆ ಎಂದು ಹೇಳಿದ್ದಾರೆ. ಎನ್‌ಸಿಡಬ್ಲ್ಯೂ ಸದಸ್ಯರಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಅವರಿಗೆ ರಾಜಕೀಯ ಪಯಣದುದ್ದಕ್ಕೂ ಅವರ ಅಚಲ ಬೆಂಬಲಕ್ಕಾಗಿ ಧನ್ಯವಾದ ಹೇಳುತ್ತೇನೆ. ತಾನು ಸಕ್ರಿಯ ರಾಜಕೀಯದಲ್ಲಿ ಮುಂಚೂಣಿಗೆ ಮರಳುವ ನಿರ್ಧಾರದಲ್ಲಿ ಬಿಜೆಪಿ ನಾಯಕತ್ವವು ಮಹತ್ವದ ಪಾತ್ರವನ್ನು ವಹಿಸಿದೆ. ಈಗಿನಿಂದಲೇ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.