ದೆಹಲಿ : ಮಂಡ್ಯ ಸಂಸದೆ, ನಟಿ ಸುಮಲತಾ ಅಂಬರೀಷ ಅವರು ಗುರುವಾರ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಅವರನ್ನು ಭೇಟಿಯಾಗಿದ್ದು, ಮಂಡ್ಯದ ಕ್ಷೇತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದ ಸಮಲತಾ ಅಂಬರೀಷ, ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ ಹಾಗೂ ಕರ್ನಾಟಕದವರೇ ಆದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ ಅವರನ್ನು ಭೇಟಿ ಮಾಡಿ ಅವರೊಂದಿಗೆ ಮಂಡ್ಯ ಲೋಕಸಭಾ ಕ್ಷೇತ್ರ ಹಾಗೂ ಚುನಾವಣೆ ಕುರಿತು ಅನೌಪಚಾರಿಕವಾಗಿ ಮಾತುಕತೆ ನಡೆಸಿದ್ದು, ತಮ್ಮ ಸಹಕಾರದ ಮಾತುಗಳಿಗೆ ಧ್ಯನವಾದ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಸ್ಥಾನ ಹಂಚಿಕೆಗಳ ಕುರಿತು ಮಾತುಕತೆಯೂ ನಡೆಯುತ್ತಿದೆ. ಇದರ ಮಧ್ಯೆ ಈ ಬಾರಿಯೂ ಸಹ ಮಂಡ್ಯ ರಾಜಕಾರಣ ಮುನ್ನೆಲೆಗೆ ಬಂದಿದ್ದು, ಜೆಡಿಎಸ್ ಈ ಸ್ಥಾನಕ್ಕಾಗಿ ಲಾಬಿ ಮಾಡಬಹುದು ಎಂದು ಹೇಳಲಾಗುತ್ತಿದೆ. ಇದೇವೇಳೆ ಹಾಲಿ ಸಂಸದೆ ಮಂಡ್ಯವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ಬಿಜೆಪಿ-ಜೆಡಿಎಸ್ ಮೈತ್ರಿಯಾದರೂ ಮಂಡ್ಯ ಕ್ಷೇತ್ರವನ್ನು ಹಾಲಿ ಸಂಸದೆಯಾಗಿರುವ ತನಗೆ ಬಿಗಿಪಟ್ಟು ಹಿಡಿದಿದ್ದಾರೆ. ಇದೇ ಪ್ರಯತ್ನದಲ್ಲಿ ಅವರು ಬಿಜೆಪಿ ಉನ್ನತ ನಾಯಕರನ್ನು ಭೇಟಿಯಾಗಿದ್ದಾರೆ.
ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ನೀಡದೆ ಬಿಜೆಪಿಗೆ ಉಳಿಸಿಕೊಂಡು ತನಗೆ ಟಿಕೆಟ್ ನೀಡುವಂತೆ ಬಿಜೆಪಿ ಹೈಕಮಾಂಡ್ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಜೊತೆ ಸುಮಾಲತಾ ಅಂಬರೀಷ ನಡುವೆ ಸುದೀರ್ಘವಾಗಿ ಮಾತುಕತೆ ನಡೆದಿದ್ದು, ಮಂಡ್ಯ ರಾಜಕೀಯ ಬಗ್ಗೆ ನಡ್ಡಾ ಗಮನಕ್ಕೆ ತಂದಿದ್ದಾರೆ. ಅಲ್ಲದೆ, ಮಂಡ್ಯ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡು ಟಿಕೆಟ್ ತಮಗೆ ನೀಡಬೇಕೆಂದು ಮನವಿ ಮಾಡಿದ್ದು, ಯಾವುದೇ ಕಾರಣಕ್ಕೂ ಮಂಡ್ಯವನ್ನು ಜೆಡಿಎಸ್ಗೆ ಬಿಟ್ಟುಕೊಡಬೇಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.