ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರಲು ಮುಂದಾಗಿರುವ ಬಿಜೆಪಿ ಇಂದು ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಂದು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಪ್ರಖ್ಯಾತ ನಾಯಕರ ಹೆಸರು ಸೇರಿವೆ.
ನವದೆಹಲಿ: ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ ತನ್ನ ಅಭ್ಯರ್ಥಿಗಳ 8ನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 11 ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ. ಮಾಜಿ ಐಪಿಎಸ್ ಅಧಿಕಾರಿ ದೇಬಶಿಶ್ ಧರ್ ಪಶ್ಚಿಮ ಬಂಗಾಳದ ಬಿರ್ಭುಮ್ನಿಂದ ಸ್ಪರ್ಧೆಗೆ ಇಳಿದಿದ್ದಾರೆ. ಮಾಜಿ ಕೇಂದ್ರ ಸಚಿವೆ ಪ್ರಣೀತ್ ಕೌರ್ ಪಂಜಾಬ್ನ ಪಟಿಯಾಲಾದಿಂದ ಕಣಕ್ಕೆ ಇಳಿಯಲಿದ್ದಾರೆ.
2010ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರುವ ದೇಬಶಿಶ್ ಧರ್ ಅವರು ಮಾರ್ಚ್ 20ರಂದು ತಮ್ಮ ಸೇವೆಗೆ ರಾಜೀನಾಮೆ ನೀಡಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಮತ್ತು ಸಾಮಾಜಿಕ ಗುರಿಗಳನ್ನು ಸಾಧಿಸಲು ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಬರೆದಿದ್ದರು. ಪಶ್ಚಿಮ ಬಂಗಾಳದಿಂದ ಇಬ್ಬರು, ಒಡಿಶಾದಿಂದ ಮೂವರು ಮತ್ತು ಪಂಜಾಬ್ಗಾಗಿ ಆರು ಅಭ್ಯರ್ಥಿಗಳನ್ನು ಬಿಜೆಪಿ ಶನಿವಾರ ಹೆಸರಿಸಿದೆ. ಒಟ್ಟಾರೆಯಾಗಿ ಈವರೆಗೆ 411 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.
ಪಶ್ಚಿಮ ಬಂಗಾಳದಲ್ಲಿ ಗಮನ ಸೆಳೆಯುವ ಡೈಮಂಡ್ ಹಾರ್ಬರ್ ಮತ್ತು ಅಸನ್ಸೋಲ್ ಸ್ಥಾನಗಳಿಗೆ ಕೇಸರಿ ಪಕ್ಷವು ಇನ್ನೂ ಯಾವುದೇ ಅಭ್ಯರ್ಥಿಯನ್ನು ಆಯ್ಕೆ ಮಾಡಿಲ್ಲ. ಈ ಬಾರಿ ಪಕ್ಷವು ನಟ ಸನ್ನಿ ಡಿಯೋಲ್ ಅವರನ್ನು ಬದಲಿಸಿದೆ ಮತ್ತು ದಿನೇಶ್ ಸಿಂಗ್ ಬಬ್ಬು ಅವರಿಗೆ ಗುರುದಾಸ್ಪುರದ ಟಿಕೆಟ್ ನೀಡಿದೆ.
ಬಂಗಾಳದ ಸರ್ಕಾರಿ ವೈದ್ಯ ಪ್ರಣತ್ ಟುಡು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಜಾರ್ಗ್ರಾಮ್ನಿಂದ ಬಿಜೆಪಿ ಟಿಕೆಟ್ ಮೂಲಕ ಸ್ಪರ್ಧಿಸಲಿದ್ದಾರೆ. ಪಂಜಾಬ್ನ ಲುಧಿಯಾನದಿಂದ ರವ್ನೀತ್ ಸಿಂಗ್ ಬಿಟ್ಟು ಅವರು, ಫರಿದ್ಕೋಟ್ನಿಂದ ಹಂಸರಾಜ್ ಹನ್ಸ್, ಅಮೃತಸರದಿಂದ ತರಣ್ಜಿತ್ ಸಂಧು, ಜಲಂಧರ್ನಿಂದ ಸುಶೀಲ್ ಕುಮಾರ್ ರಿಂಕು, ಕಂಧಮಾಲ್ನಿಂದ ಸುಕಾಂತ ಕುಮಾರ್ ಸೇರಿದಂತೆ ಇತರ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.
ಅಮೆರಿಕದಲ್ಲಿನ ಭಾರತದ ಮಾಜಿ ರಾಯಭಾರಿ ತರಣ್ಜಿತ್ ಸಿಂಗ್ ಸಂಧು ಅಮೃತಸರದಿಂದ ಚುನಾವಣಾ ಕಣಕ್ಕೆ ಇಳಿದಿರುವುದು ಬಿಜೆಪಿ ಪಾಲಿಗೆ ಲಾಭದಾಯಕವಾಗಿದೆ.