ಬೆಂಗಳೂರು: ರಾಜ್ಯಾದ್ಯಂತ ಶನಿವಾರ ನಡೆದ ಎಸ್ಸೆಸ್ಸೆಲ್ಸಿ ವಿಜ್ಞಾನ ಪರೀಕ್ಷೆಗೆ ಬರೋಬ್ಬರಿ 15,311 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ.

ಈ ಪರೀಕ್ಷೆಗೆ 8,56,750 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ 8,41,439 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದಾರೆ. ಭಾರೀ ಪ್ರಮಾಣದ ಗೈರು ಹಾಜರಿಗೆ ಕಾರಣ ತಿಳಿದುಬಂದಿಲ್ಲ.

ಇದೇ ಪರೀಕ್ಷೆಯಲ್ಲಿ ನಕಲು ಮಾಡಲು ಯತ್ನಿಸಿದ ಬಾಗಲಕೋಟೆಯ ಒಬ್ಬ ವಿದ್ಯಾರ್ಥಿಯನ್ನು ಡಿಬಾ‌ರ್ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಪರೀಕ್ಷಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಕಾಪಿ ಹೊಡೆಯುತ್ತಿದ್ದರೂ ಅದನ್ನು ತಡೆಯದೆ ಸಹಕರಿಸಿದ್ದಕ್ಕಾಗಿ ನಾಲ್ವರು ಶಿಕ್ಷಕರನ್ನು ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಎಲ್ಲ ಶಿಕ್ಷಕರನ್ನು ಕರ್ತವ್ಯ ಲೋಪದ ಆಧಾರದಲ್ಲಿ ಅಮಾನತು ಮಾಡಲಾಗಿದೆ. ಚಿತ್ರದುರ್ಗ ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರು (ಡಿಡಿಪಿಐ) ರವಿಶಂಕರರೆಡ್ಡಿ ಅವರು ಈ ಅಮಾನತು ಆದೇಶ ಹೊರಡಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಮಂಜರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ರೇವಣ್ಣ, ಚಳ್ಳಕೆರೆ ತಾಲೂಕಿನ ಗೋಸಿಕೆರೆ ಗ್ರಾಮದ ಪ್ರೌಢಶಾಲೆ ಶಿಕ್ಷಕ ರಾಘವೇಂದ್ರ, ಪಿ.ಓಬನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಚಂದ್ರಶೇಖರ್ ಹಾಗೂ ಕೊರ್ಲಕುಂಟೆ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಪ್ರಕಾಶ್ ಅಮಾನತುಗೊಂಡ ಶಿಕ್ಷಕರು.