ಯಾದಗಿರಿ: ಮುಂಬರುವ ಲೋಕಸಭಾ ಚುನಾವಣೆ ಜೊತೆಗೆ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಹಾಗೂ ಶಾಸಕರೂ ಆಗಿದ್ದ ರಾಜಾ ವೆಂಕಟಪ್ಪ ನಾಯಕ (67) ಅವರ ನಿಧನದಿಂದ ತೆರವಾಗಿರುವ ಸುರಪುರ ವಿಧಾನ ಸಭಾ ಕ್ಷೇತ್ರಕ್ಕೂ ಉಪ ಚುನಾವಣೆ ನಡೆಯುವ ಸಾಧ್ಯತೆ ಗಳು ದಟ್ಟವಾಗಿವೆ.
ಇವಿಎಂ ಯಂತ್ರಗಳು ಸೇರಿದಂತೆ ಸುರಪುರ ಉಪ ಚುನಾವಣೆಗಾಗಿ ಅಗತ್ಯವಿರುವ ಸಿದ್ಧತೆಗಳನ್ನು ತೀವ್ರಗತಿಯಲ್ಲಿ ನಡೆಸಲಾಗುತ್ತಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಸುರಪುರದ ಶಾಸಕರಾಗಿದ್ದ ಕಾಂಗ್ರೆಸ್ಸಿನ ರಾಜಾ ವೆಂಕಟಪ್ಪ ನಾಯಕ್ ಅವರು ಅನಾರೋಗ್ಯದಿಂದಾಗಿ ಫೆ.25 ರಂದು ನಿಧನರಾಗಿದ್ದಾರೆ. ಈ ಮಧ್ಯೆ, ವಿಧಾನಸಭಾ ಉಪ ಚುನಾವಣೆಯಲ್ಲಿ ರಾಜಾ ವೆಂಕಟಪ್ಪ ನಾಯಕ್ ಅವರ ಪುತ್ರ ವೇಣುಗೆ ಕಾಂಗ್ರೆಸ್ ಟಿಕೆಟ್ ನೀಡುವ ಸಾಧ್ಯತೆಗಳಿವೆ.
ಬಿಜೆಪಿ ಮಾಜಿ ಶಾಸಕ ರಾಜುಗೌಡ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಾಗಿದೆ. ಅವರಿಗೆ ಚುನಾವಣೆ ಎದುರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಪಕ್ಷ ಈಗಾಗಲೇ ಸೂಚನೆ ರವಾನಿಸಿದೆ.