ಬೆಂಗಳೂರು : ಚುನಾವಣೆಗಳು ಬಂದರೆ ಒಂದೇ ಹೆಸರಿನ ಹಲವರು ಕಣಕ್ಕಿಳಿಯುವುದು ಹೊಸದಲ್ಲ. ಇದೀಗ ಮತ್ತೆ ಚುನಾವಣೆ ಎದುರಾಗಿದೆ. ಇದೇ ಹೊತ್ತಲ್ಲಿ ಒಂದೇ ಹೆಸರಿನ ಹಲವರು ಚುನಾವಣೆಗೆ ಸ್ಪರ್ಧಿಸುತ್ತಿರುವುದು ಗಮನಸೆಳೆದಿದೆ.

ಮಾಜಿ ಪ್ರಧಾನಿ ದೇವೇಗೌಡರ ಅಳಿಯನ ಸ್ಪರ್ಧೆಯಿಂದ ಇದೀಗ ಬೆಂಗಳೂರು ಗ್ರಾಮಾಂತರ ದೇಶದ ಗಮನ ಸೆಳೆದಿದೆ. ಆ ಕ್ಷೇತ್ರದಲ್ಲಿ ಇದೀಗ ಒಂದೇ ಹೆಸರಿನ ಇಬ್ಬರು ಅಭ್ಯರ್ಥಿಗಳು ಚುನಾವಣಾ ರಣಕಣಕ್ಕೆ ಇಳಿದಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಮತ್ತೊಬ್ಬ ಡಾ.ಮಂಜುನಾಥ ಚುನಾವಣಾ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಡಾ.ಸಿ.ಎನ್.ಮಂಜುನಾಥ ಆದ ನಾನು ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದೇನೆ ಎಂದು ಡಾ. ಮಂಜುನಾಥ ತಿಳಿಸಿದರು.

ಮತದಾರರಲ್ಲಿ ಗೊಂದಲ: ಈ ಬಾರಿ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ ಕಣಕ್ಕಿಳಿದಿದ್ದು, ಅವರಿಗೆ ಸ್ಪರ್ಧೆಯೊಡ್ಡಲು ಅದೇ ಹೆಸರಿನ ಡಾ. ಸಿ.ಎನ್. ಮಂಜುನಾಥ ಎಂಬುವರು ಬಹುಜನ
ಭಾರತ ಪಾರ್ಟಿಯಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಕುತೂಹಲ ಸಂಗತಿಯೆಂದರೆ ಒಂದೇ ಹೆಸರು ಹಾಗೂ ತಂದೆಯ ಹೆಸರೂ ಕೂಡ ಒಂದೇ ಆಗಿದ್ದು, ಒಂದೇ ಜಿಲ್ಲೆ ಒಂದೇ ತಾಲೂಕು ಹಾಗೂ ಇಬ್ಬರಿಗೂ ಗೌರವ ಡಾಕ್ಟರೇಟ್ ದೊರೆತಿರುವುದು ಅಚ್ಚರಿಯ ಸಂಗತಿ.