ಬೆಳಗಾವಿ : ಭಾರಿ ಮಳೆಯ ನಡುವೆ ಮಹದಾಯಿ ಜಲಾನಯನ ಪ್ರದೇಶಕ್ಕೆ ಇಂದು ಕೇಂದ್ರದ ಪ್ರವಾಹ ತಂಡದ ಸದಸ್ಯರು ಭೇಟಿ ನೀಡಿ ವೀಕ್ಷಣೆ ನಡೆಸಿದ್ದಾರೆ. ಕರ್ನಾಟಕ ಮತ್ತು ಗೋವಾ ಗಡಿಯ ಚೋರ್ಲಾ ಘಾಟ್ ಪ್ರದೇಶ ಹಾಗೂ ಹರತಾಳ ನಾಲೆ ವೀಕ್ಷಿಸಿದ ಅಧಿಕಾರಿಗಳಿಗೆ ನೀರಾವರಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಕರ್ನಾಟಕ ಸರಕಾರ ಯಾವುದೇ ಅನುಮತಿ ಇಲ್ಲದೆ ಮಹದಾಯಿ ಯೋಜನೆ ಕಾಮಗಾರಿ ಆರಂಭಿಸಿದೆ ಎಂಬ ಆರೋಪ ಗೋವಾ ರಾಜ್ಯ ಸರ್ಕಾರದ್ದು. ಈ ಹಿನ್ನೆಲೆಯಲ್ಲಿ ಸದಸ್ಯರು ಪರಿಶೀಲನೆ ನಡೆಸಿದ್ದಾರೆ. ಆದರೆ, ಯಾವುದೇ ಕಾಮಗಾರಿ ನಡೆದಿಲ್ಲ ಎಂದು ಕೇಂದ್ರ ತಂಡಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳು ವಿವರಿಸಿದರು. ನಂತರ ಕಣಕುಂಬಿ ಅತಿಥಿ ಗೃಹದಲ್ಲಿ ಸಭೆ ನಡೆಸಿದ ಕೇಂದ್ರದ ಪ್ರವಾಹ ತಂಡಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳು ಕರ್ನಾಟಕ ಕೈಗೊಂಡಿರುವ ಕಳಸ ಬಂಡೂರಿ ನಾಲಾ ಯೋಜನೆಯ ಸಮಗ್ರ ವಿವರಣೆ ನೀಡಿದ್ದಾರೆ.