ಬೆಳಗಾವಿ :
ಬೆಳಗಾವಿ ಜಿಲ್ಲೆಯ ವಿಭಜನೆಗೆ ಕೊನೆಗೂ ಮುಹೂರ್ತ ಕೂಡಿ ಬಂದಂತಿದೆ. ಈ ನಿಟ್ಟಿನಲ್ಲಿ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬೆಳಗಾವಿ ಜಿಲ್ಲಾ ವಿಭಜನೆ ಮಾಡುವತ್ತ ದಿಟ್ಟ ಹೆಜ್ಜೆ ಇಟ್ಟಿರುವುದು ಬೆಳಕಿಗೆ ಬಂದಿದೆ.
ಲೋಕಸಭಾ ಚುನಾವಣೆಗೂ ಮುನ್ನ ಅಂದರೆ ರಾಜ್ಯ ಸರಕಾರ ಮಂಡಿಸುವ ಬಜೆಟ್ ನಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ಗೋಕಾಕ ನೂತನ ಜಿಲ್ಲೆಗಳ ಘೋಷಣೆ ಸಾಧ್ಯತೆ ಇದೆ.
ಭೌಗೋಳಿಕ ವಿಸ್ತೀರ್ಣದಲ್ಲಿ ಅತ್ಯಂತ ದೊಡ್ಡ ಜಿಲ್ಲೆ ಎನಿಸಿಕೊಂಡಿರುವ ಅಖಂಡ ಬೆಳಗಾವಿಯನ್ನು ವಿಭಜಿಸಿ, 3 ಪ್ರತ್ಯೇಕ ಜಿಲ್ಲೆಗಳನ್ನು ರಚಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬ ಮಾಹಿತಿ ಲಭಿಸಿದೆ.
ಖಚಿತ ಮೂಲಗಳ ಪ್ರಕಾರ, ಬೆಳಗಾವಿಯನ್ನು ಹಾಗೆಯೇ ಉಳಿಸಿ, ಚಿಕ್ಕೋಡಿ, ಗೋಕಾಕ ಗಳನ್ನು ಪ್ರತ್ಯೇಕ ಜಿಲ್ಲೆಗಳನ್ನಾಗಿ ವಿಭಾಗಿಸಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಅಗತ್ಯ ಮಾಹಿತಿ ನೀಡುವಂತೆ ಬೆಳಗಾವಿ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆನ್ನವರ ಅವರಿಗೆ ಸೂಚಿಸಿರುವುದು ತಿಳಿದುಬಂದಿದೆ.
ಬೆಳಗಾವಿಯಲ್ಲಿ ಹೊಸ ಜಿಲ್ಲೆ, ತಾಲೂಕುಗಳ ರಚನೆ ಕುರಿತ ವಿವಿಧ ಸಂಘಟನೆಗಳು ಹಾಗೂ ಕನ್ನಡ ಹೋರಾಟಗಾರರು ಸಲ್ಲಿಸಿರುವ ಮನವಿಗಳ ಆಧಾರದ ಮೇಲೆ ಸರಕಾರ ಕೇಳಿರುವ ಮಾಹಿತಿಯಂತೆ ಪ್ರಾದೇಶಿಕ ಆಯುಕ್ತರು ಜಿಲ್ಲಾಡಳಿತಕ್ಕೆ ಈಗಾಗಲೇ ಮಾಹಿತಿ ರವಾನಿಸಿದ್ದು ಸಮಗ್ರ ವರದಿಯನ್ನು ಜಿಲ್ಲಾಡಳಿತ ಇಷ್ಟರಲ್ಲೇ ರಾಜ್ಯ ಸರಕಾರಕ್ಕೆ ಸಲ್ಲಿಸಲಿದೆ.
ಬೆಳಗಾವಿ ಜಿಲ್ಲಾ ವಿಭಜನೆ ಕೂಗು ಇಂದು ನಿನ್ನೆಯದ್ದಲ್ಲ. ಮೂರು ದಶಕಗಳಿಗಿಂತ ಹಿಂದಿನದ್ದು. ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ, ಗೋಕಾಕ, ಬೈಲಹೊಂಗಲ, ಅಥಣಿ ಜಿಲ್ಲೆಯನ್ನು ರಚಿಸಬೇಕು ಎಂಬ ಕೂಗು ಆಗಾಗ ಆಯಾ ಭಾಗದಿಂದ ಮೊಳಗುತ್ತಿದೆ. 1997 ರಲ್ಲಿ ಜೆ.ಎಚ್.ಪಟೇಲ್ ಮುಖ್ಯಮಂತ್ರಿ ಆಗಿದ್ದಾಗ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ಗೋಕಾಕಗಳನ್ನು ಕೇಂದ್ರೀಕರಿಸಿ ಹೊಸ ಜಿಲ್ಲೆಗಳನ್ನು ರಚಿಸಿ ಅಧಿಸೂಚನೆ ಹೊರಡಿಸಿದ್ದರು. ಆದರೆ, ಜಿಲ್ಲಾ ವಿಭಜನೆಯಿಂದ ಬೆಳಗಾವಿಯಲ್ಲಿ ಮರಾಠಿಗರ ಪ್ರಾಬಲ್ಯ ಹೆಚ್ಚಾಗುತ್ತದೆ ಎಂಬ ಕನ್ನಡ ಸಂಘಟನೆಗಳ ಒತ್ತಡದಿಂದ ಅಧಿಸೂಚನೆಯನ್ನು ರಾಜ್ಯ ಸರಕಾರ ಹಿಂದಕ್ಕೆ ಪಡೆದಿತ್ತು. ಇದೀಗ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜಿಲ್ಲೆಯ ಜನತೆಯ ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ತವಕದಲ್ಲಿದೆ.