ಬೆಂಗಳೂರು :
ಪ್ರಶಸ್ತಿಗಳ ಆಯ್ಕೆಯಲ್ಲಿ ಆಯ್ಕೆ ಸಮಿತಿ ನಿರ್ಣಯವೇ ಅಂತಿಮ. ನಾವು ಮೂಗು ತೀರಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜೀವಮಾನ ಸಾಧನೆಗಾಗಿ ಕೊಡಮಾಡುವ ವಿವಿಧ ಪ್ರಶಸ್ತಿಗಳನ್ನು 75 ಮಹನೀಯರಿಗೆ ನೀಡಿ ಸನ್ಮಾನಿಸಿ ಮಾತನಾಡಿದರು.

ಸಾಹಿತ್ಯ, ಕಲೆ , ಸಂಸ್ಕೃತಿ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಉತ್ತೇಜನ ನೀಡುವುದು ಸಮಾಜ ಮತ್ತು ಸರ್ಕಾರದ ಜವಾಬ್ದಾರಿ. ನಮ್ಮ ಸಸರ್ಕಾರ ಕಲೆ, ಸಾಹಿತ್ಯ, ಸಂಸ್ಕೃತಿಗೆ ಪ್ರೋತ್ಸಾಹ ನೀಡುವುದರಲ್ಲಿ ಹಿಂದೆ ಬೀಳುವುದಿಲ್ಲ ಎಂದರು.

ಪ್ರಶಸ್ತಿಗಳ ಆಯ್ಕೆಯಲ್ಲಿ ಆಯ್ಕೆ ಸಮಿತಿ ನಿರ್ಣಯವೇ ಅಂತಿಮ. ನಾವು ಮೂಗು ತೀರಿಸುವುದಿಲ್ಲ. ಈ ವಿಚಾರದಲ್ಲಿ ನಾನು ಬಹಳ ನಿಷ್ಠುರವಾಗಿ ವರ್ತಿಸುತ್ತೇನೆ. ನನ್ನ ಮೇಲೆ ಒತ್ತಡ ಹಾಕುವ ಎಲ್ಲರಿಗೂ ನಾನು ಅಷ್ಟೆ ನಿಷ್ಠುರವಾಗಿ ಹೇಳಿಬಿಡುತ್ತೇನೆ ಎಂದರು.

ನಮ್ಮ ಸರ್ಕಾರ ಜನರ ನಂಬಿಕೆಗಳನ್ನು ಗೌರವಿಸುತ್ತದೆ. ಬಸವಣ್ಣನವರು ಮೌಡ್ಯ ಮುಕ್ತ, ಜಾತಿ ಮುಕ್ತ, ವರ್ಗ ಮುಕ್ತ ಸಮ ಸಮಾಜ ನಿರ್ಮಾಣಕ್ಕೆ ಒತ್ತು ನೀಡಿದ್ದರು. ಅದಕ್ಕೆ ದೇಹವೇ ದೇಗುಲ ಎಂದು ವಚನಕಾರರು ಪ್ರತಿಪಾದಿಸಿದ್ದಾರೆ. ಆದರೆ ಕೆಲವರು ದೇವಸ್ಥಾನದಲ್ಲಿ ಮಾತ್ರ ದೇವರಿದ್ದಾನೆ ಎಬ್ನುವ ನಂಬಿಕೆಯಿಂದ ಹೋಗುತ್ತಾರೆ. ಅವರ ನಂಬಿಕೆಯನ್ನೂ ಗೌರವಿಸುತ್ತೇವೆ. ದೇವಸ್ಥಾನಕ್ಕೆ ಹೋಗುವವರು ಅವರ ಇಷ್ಟದ ಉಡುಪು ಧರಿಸಿ ಹೋಗಬಹುದು. ಈ ವಿಚಾರದಲ್ಲೂ ನಮ್ಮದೇನೂ ಅಭ್ಯಂತರ ಇಲ್ಲ ಎಂದರು.

ದೇವರು, ಧರ್ಮದ ಬಗ್ಗೆ ಯಾರ ನಂಬಿಕೆ ಏನೇ ಇದ್ದರೂ ಎಲ್ಲರೂ ಮೊದಲು ಮನುಷ್ಯರಾಗಬೇಕು. ಮನುಷ್ಯ ಮನುಷ್ಯರನ್ನು ದ್ವೇಷಿಸಬಾರದು. ಇದೇ ಅತ್ಯುನ್ನತ ಮೌಲ್ಯ ಎಂದರು.

ರವೀಂದ್ರ ಕಲಾ ಕ್ಷೇತ್ರ ಮತ್ತು ಸಂಸ ರಂಗ ಮಂದಿರ ನವೀಕರಣಕ್ಕೆ ಇಷ್ಟೆ ಖರ್ಚು ಮಾಡಬೇಕು ಎನ್ನುವ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. 24 ಕೋಟಿ ಖರ್ಚು ಮಾಡಿ ನವೀಕರಣ ಮಾಡುತ್ತಿದೆ ಎನ್ನುವುದು ಸರಿಯಲ್ಲ. ಮೊತ್ತದ ಬಗ್ಗೆ ಯಾವ ತೀರ್ಮಾನವೂ ಆಗಿಲ್ಲ ಎಂದು ಪುನರುಚ್ಚರಿಸಿದರು.

2020-21 ರಿಂದ 2023-24ನೇ ಸಾಲಿನ ಬಸವ ರಾಷ್ಟ್ರೀಯ ಪುರಸ್ಕಾರ, ಶ್ರೀ ಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ, ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ, ಪಂಡಿತ್ ಪಂಚಾಕ್ಷರಿ ಗವಾಯಿ ಪ್ರಶಸ್ತಿ, ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಅಕ್ಕಮಹಾದೇವಿ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿ, ಪಂಪ ಪ್ರಶಸ್ತಿ, ಶ್ರೀ ನಿಜಗುಣ ಪುರಂದರ ಪ್ರಶಸ್ತಿ, ಕುಮಾರವ್ಯಾಸ ಪ್ರಶಸ್ತಿ, ಶಾಂತಲಾನಾಟ್ಯ ರಾಣಿ ಪ್ರಶಸ್ತಿ, ಸಂತ ಶಿಶುನಾಳ ಷರೀಫ ಪ್ರಶಸ್ತಿ, ಪ್ರೊ.ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಬಿ.ವಿ.ಕಾರಂತ ಪ್ರಶಸ್ತಿ, ಡಾ.ಗುಬ್ಬಿ ವೀರಣ್ಣ ಪ್ರಶಸ್ತಿ, ಡಾ.ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ ಪುರಸ್ಕೃತರಾದ ಒಟ್ಟು 75 ಮಂದಿಗೆ ಮುಖ್ಯಮಂತ್ರಿಗಳು ಪ್ರಶಸ್ತಿ ನೀಡಿ ಗೌರವಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಶರಣ ಶ್ರೇಷ್ಠರಾದ ಬಸವಣ್ಣನವರನ್ನು ಕನ್ನಡ ನಾಡಿನ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಲಾಖೆ ಪರವಾಗಿ ಅಭಿನಂದನೆ ಸಲ್ಲಿಸಿದರು.