ಶಂಕರನಾರಾಯಣ :
ಮದರ್ ತೆರೆಸಾ ಶಿಕ್ಷಣ ಸಂಸ್ಥೆ ಶಂಕರನಾರಾಯಣ ಇಲ್ಲಿ 25 ವರ್ಷಗಳ ಸಂವತ್ಸರಗಳನ್ನ ಪೂರೈಸಿದ
ಸುಸಂದರ್ಭದಲ್ಲಿ ರಜತ ಮಹೋತ್ಸವವನ್ನು ಇದೇ ತಿಂಗಳ 7 ಮತ್ತು 8ರಂದು ಅದ್ದೂರಿಯಾಗಿ ಆಚರಿಸಲಾಗಿತ್ತು. ದಿನಾಂಕ 27.01.2024ರಂದು ರಜತ ಮಹೋತ್ಸವದ ಸಮಾರೋಪ ಸಮಾರಂಭವು ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಅರ್ಥಪೂರ್ಣವಾಗಿ ನೆರವೇರಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉಡುಪಿಯ ಡಯಟ್ ನ ಹಿರಿಯ ಉಪನ್ಯಾಸಕ ಡಾ. ಅಶೋಕ್ ಕಾಮತ್ ಸಾಂಕೇತಿಕವಾಗಿ ಚಾಲನೆ ನೀಡಿದರು . 25 ಸಂವತ್ಸರಗಳ ಸವಿ ನೆನಪನ್ನು ಹೊತ್ತ ಮೆಟ್ಟಿಲುಗಳನ್ನು ಆಕಾಶದತ್ತ ಹಾರಿಸಿ ಬಿಡುವ ಮೂಲಕ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರು, ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮಾಜಿ ಸಂಪಾದಕ ಡಾ. ರೊನಾಲ್ಡ್ ಫೆರ್ನಾಂಡಿಸ್ ಕಾರ್ಯಕ್ರಮಕ್ಕೆ ವೈವಿಧ್ಯಮಯವಾಗಿ ಚಾಲನೆ ನೀಡಿದರು. ರೌಪ್ಯೋತ್ಸವದ ಸವಿ ನೆನಪಿನಲ್ಲಿ ಸಿದ್ದಗೊಂಡ ” ರೌಪ್ಯಯಾನ” ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ‘ರೌಪ್ಯಯಾನ’ವನ್ನು ಬಿಡುಗಡೆಗೊಳಿಸಿ ಮಾತನಾಡಿದ ಡಾ. ರೊನಾಲ್ಡ್ ಫರ್ನಾಂಡಿಸ್ ರವರು “ಎಲ್ಲ ಇದ್ದು ಸಾಧಿಸುವುದು ದೊಡ್ಡ ಸಾಧನೆ ಅಲ್ಲ ಏನು ಇಲ್ಲದೆ ಸಾಧಿಸುವುದು ದೊಡ್ಡ ಸಾಧನೆ” ಎನ್ನುತ್ತಾ ಸಂಸ್ಥಾಪಕದ್ವಯರ ಪರಿಶ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಲೋಕ ಸೇವಾ ಆಯೋಗದ ಪರೀಕ್ಷೆಗಳಲ್ಲಿ ಹಳ್ಳಿಗಾಡಿನ ವಿದ್ಯಾರ್ಥಿಗಳು ಇನ್ನಷ್ಟು ಉತ್ತಮ ಸಾಧನೆ ಮಾಡಬೇಕೆಂಬ ಮಾತುಗಳನ್ನು ಹೇಳಿದರು.

ಶಂಕರನಾರಾಯಣ ತಾಲೂಕು ರಚನಾ ಹೋರಾಟ ಸಮಿತಿಯ ಸಂಚಾಲಕ, ಸಾಮಾಜಿಕ ಹೋರಾಟಗಾರ ಚಿಟ್ಟೆ ರಾಜಗೋಪಾಲ್ ಹೆಗ್ಡೆ, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಪಿ. ಜಗನ್ನಾಥ ಶೆಟ್ಟಿ , ಉಳ್ಳೂರಿನ ಆನಂದ ಕ್ಯಾಶ್ಯು ಇಂಡಸ್ಟ್ರೀಸ್ ನ ಮಾಲಕ ಚಂದ್ರಶೇಖರ್ ಶೆಟ್ಟಿ ಮತ್ತು ಸಂಸ್ಥೆಯ ಸ್ಥಾಪಕ ದ್ವಾಯರಾದ ರೆಮಿಟ ಲೋಬೋ ಹಾಗೂ ಶಮಿತ ರಾವ್ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳು ಮಾತನಾಡಿ ಆರಂಭದ ದಿನದಿಂದಲೂ ಸಂಸ್ಥೆಯ ಜೊತೆಗಿದ್ದ ತಮ್ಮ ಸಂಬಂಧವನ್ನು ಮತ್ತು ಸಂಸ್ಥೆಯ ಕುರಿತಾದ ಅಭಿಮಾನವನ್ನು ತಮ್ಮ ಮಾತುಗಳ ಮೂಲಕ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಯಟ್ ನ ಹಿರಿಯ ಉಪನ್ಯಾಸಕ ಅಶೋಕ್ ಕಾಮತ್ ಮಾತನಾಡಿ ಸಂಸ್ಥೆಯ ಸಾಧನೆಯ ಕುರಿತು ಸಂತಸ ವ್ಯಕ್ತಪಡಿಸಿ, ವಿದ್ಯಾರ್ಥಿಗಳಲ್ಲಿ ಪರಸ್ಪರ ಸಹಾಯ ಮಾಡುವ ಮನೋಭಾವ ಬೆಳೆಯಬೇಕು ಎಂದು ಕಿವಿ ಮಾತನ್ನು ಹೇಳಿದರು .

ಈ ಎಲ್ಲಾ ಕಾರ್ಯಕ್ರಮಗಳ ಜೊತೆ ಜೊತೆಗೆ ಸಂಸ್ಥಾಪಕದ್ವಯರ ಧ್ಯೇಯಕ್ಕೆ ಶಕ್ತಿ ನೀಡಿ ವಿವಿಧ ವಿಭಾಗಗಳಲ್ಲಿ ಸಹಕರಿಸಿದ ಮಹನೀಯರಿಗೆ ಸನ್ಮಾನಿಸಲಾಯಿತು. ಬೇಬಿ ಸ್ವಾಗತಿಸಿದರು. ಪ್ರೌಢಶಾಲಾ ವಿಭಾಗದ ಗಣಿತ ಶಿಕ್ಷಕ ಜಗದೀಶ್ ವಂದಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥ ರಾಮ ಭಟ್
ಸಜಂಗದ್ದೆ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನ ಕಾರ್ಯಕ್ರಮಗಳು ನಡೆದವು.
ನಂತರ ಉಪನ್ಯಾಸಕರಾದ ಪಂಪ ಪೆರಾಜೆ ಹಾಗೂ ರಶಿಕ್ ಶೆಟ್ಟಿ ರಚಿಸಿ ನಿರ್ದೇಶಿಸಿದ ಮಾಯಾಪುರ ಎಂಬ ನಾಟಕದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.