ಕಲಬುರಗಿ :
ಅಣ್ಣ ಹಾಗೂ ತಂಗಿ ಭಾನುವಾರ ರಾತ್ರಿ ಬಾವಿಯಲ್ಲಿ ಬಿದ್ದು ಮೃತಪಟ್ಟ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಪಟಪಳ್ಳಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮೃತರನ್ನು ಪಟಪಳ್ಳಿಯ ಸಂದೀಪ (23) ಹಾಗೂ ಆತನ ತಂಗಿ ನಂದಿನಿ‌ (19) ಎಂದು ಗುರುತಿಸಲಾಗಿದೆ.
ಪಿಯುಸಿ ನಂತರ ಓದನ್ನು ಮಧ್ಯದಲ್ಲೇ ನಿಲ್ಲಿಸಿದ್ದ ನಂದಿನಿಗೆ ಕಾಲೇಜಿಗೆ ಹೋಗು ಎಂದರೂ ಆಕೆ ಕೇಳಿಲ್ಲವೆಂದು ಮನೆಯಲ್ಲಿ ಭಾನುವಾರ ರಾತ್ರಿ ಜಗಳವಾಗಿದೆ ಎನ್ನಲಾಗಿದೆ. ಮನೆಯವರು ಜೋರು ಮಾಡಿದ್ದಕ್ಕೆ ಸಿಟ್ಟಿನಲ್ಲಿ ನಂದಿನಿ ಮನೆಯಿಂದ ಹೊರಗೆ ಓಡಿ ಹೋಗಿದ್ದಾಳೆ. ಆಕೆಯನ್ನು ಹಿಂಬಾಲಿಸಿಕೊಂಡು ಅಣ್ಣ ಸಂದೀಪ ಸಹ ಹೋಗಿದ್ದಾನೆ. ಹೊರಗೆ ಓಡಿಹೋದ ನಂದಿನಿ ಬಾವಿಗೆ ಜಿಗಿದಿದ್ದಾಳೆ. ಇದನ್ನು ನೋಡಿದ ಅಣ್ಣ ಅವಳನ್ನು ರಕ್ಷಿಸಲು ತಾನೂ ಬಾವಿಗೆ ಹಾರಿದ್ದಾನೆ. ಆದರೆ ಇಬ್ಬರಿಗೂ ಈಜು ಬಾರದೇ ಇರುವುದರಿಂದ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಮನೆಯಿಂದ ಹೋದ ಅಣ್ಣ-ತಂಗಿ ಎಷ್ಟು ಹೊತ್ತಾದರೂ ಮರಳಿ ಬಂದಿಲ್ಲವೆಂದು ಕುಟುಂಬದವರು ರಾತ್ರಿ ಹುಡುಕಿದ್ದಾರೆ. ಆದರೆ ಅವರಿಬ್ಬರು ಪತ್ತೆಯಾಗಿಲ್ಲ. ಪಟಪಳ್ಳಿ ಗ್ರಾಮದ ಹಳೆ ಊರಿನ‌ ಸಮೀಪದ ಬಾವಿಯಲ್ಲಿ ನಂದಿನಿ ಮುಡಿದಿದ್ದ ಹೂವುಗಳು ತೇಲುತ್ತಿರುವುದು ಕಂಡಿದೆ. ಇದರಿಂದ ಅನುಮಾನ ಬಂದು ಬಾವಿಯಲ್ಲಿ ಶೋಧಿಸಿದಾಗ ಸೋಮವಾರ ಮಧ್ಯಾಹ್ನ ನಂದಿನಿ ಮೃತದೇಹ ಪತ್ತೆಯಾಗಿದೆ. ನಂತರ ಸಂದೀಪನಿಗಾಗಿ ಅಗ್ನಿ ಶಾಮಕ ಠಾಣೆಯವರು ಶೋಧ ಕಾರ್ಯಾಚರಣೆ ನಡೆಸಿ ರಾತ್ರಿ 7 ಗಂಟೆಗೆ ಸಂದೀಪನ‌ ಮೃತ ದೇಹವನ್ನು ಬಾವಿಯಿಂದ ಹೊರ ತೆಗೆದಿದ್ದಾರೆ. ತಡರಾತ್ರಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹಗಳನ್ನು ಕುಟುಂಬದವರಿಗೆ ಒಪ್ಪಿಸಲಾಗಿದೆ.