ಅಥಣಿ:
ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೊಗುವುದಿಲ್ಲ ಎಂದು ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು.
ಸೋಮವಾರ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಕ್ಕಂಚಿ ಗ್ರಾಮದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಬಿಜೆಪಿಗೆ ಸೇರ್ಪಡೆಯಾಗಿ, ಬೀದರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎನ್ನುವ ಮಾಧ್ಯಮಗಳಲ್ಲಿನ ಸುದ್ದಿ ನನಗೆ ಅಚ್ಚರಿ ಮೂಡಿಸಿದೆ. ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಿಂದ ಎತ್ತ ಸಂಬಂಧವಯ್ಯಾ? ಆ ಸುದ್ದಿ ಎಲ್ಲವೂ ಸುಳ್ಳು ಎಂದು ಬಿಜೆಪಿ ಸೇರ್ಪಡೆಯನ್ನು ಅಲ್ಲಗಳೆದರು.
ನಾನು ಕಾಂಗ್ರೆಸ್ ಬಿಟ್ಟು ಹೋಗಿಲ್ಲ. ನನಗೆ ಅಥಣಿ ಕ್ಷೇತ್ರದ ಜನರು ಶಾಸಕರಾಗಿ ಇರುವಂತೆ ಆದೇಶ ಮಾಡಿದ್ದಾರೆ. ನಾನು ಶಾಸಕನಾಗೇ ಇರುತ್ತೇನೆ. ನಾನು ಯಾವುದೇ ಕಾರಣಕ್ಕೂ ಲೋಕಸಭಾ ಚುನಾವಣೆ ಸ್ಪರ್ಧೆ ಮಾಡುವುದಿಲ್ಲ ಎಂದು ತಿಳಿಸಿದರು.