ಪುತ್ತೂರು :
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪ ಮತಗಳಿಂದ ಸೋತಿದ್ದ ಹಿಂದೂ ಕಾರ್ಯಕರ್ತ ಅರುಣ್ ಕುಮಾ‌ರ್ ಪುತ್ತಿಲ ಮತ್ತೆ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಈ ನಡುವೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಸಮಾಲೋಚನೆ ನಡೆಸಿದೆ. ಈ ಕುರಿತು ಮಾತನಾಡಿರುವ ಪುತ್ತಿಲ, ನನಗೆ ಲೋಕಸಭಾ ಟಿಕೆಟ್ ನೀಡಬೇಕು. ಪುತ್ತೂರು ನಗರ, ಗ್ರಾಮಾಂತರ ಮಂಡಲಗಳ ಅಧ್ಯಕ್ಷ ಸ್ಥಾನ ಕೊಡಬೇಕು. ನಮ್ಮವರನ್ನೂ ಪದಾಧಿಕಾರಿ ಸ್ಥಾನಕ್ಕೆ ಪರಿಗಣಿಸಬೇಕು. ಇದೆಲ್ಲವೂ ಮೂರು ದಿನಗಳಲ್ಲೇ ಮುಗಿಯಬೇಕೆಂದು ಬೇಡಿಕೆ ಇಟ್ಟಿದ್ದಾರೆ.

ದೇಶದ ಅಭಿವೃದ್ಧಿಯ ಹರಿಕಾರ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗುತ್ತೇವೆ. ಮಾತೃಪಕ್ಷ ಬಿಜೆಪಿಯಿಂದ ಗೌರವಯುತ ಸ್ವಾಗತವನ್ನು ಬಯಸುತ್ತೇವೆ ಎಂಬ ಸಂದೇಶವನ್ನು ಪುತ್ತಿಲ ಪರಿವಾರದಿಂದ ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನಗರ ಕೋಟಚಾ ಸಭಾಂಗಣದಲ್ಲಿ ಸೋಮವಾರ ಸಂಜೆ ಕಾರ್ಯಕರ್ತರ ಸಮಾಲೋಚನ ಸಭೆ ನಡೆದು ಅಭಿಪ್ರಾಯಗಳನ್ನು ನೀಡಲಾಯಿತು. ವಾಗ್ನಿ ಶ್ರೀಕೃಷ್ಣ ಉಪಾಧ್ಯಾಯ ಮಾತನಾಡಿ, ಪುತ್ತಿಲ ಪರಿವಾರ ಎಂಬುದು ಪುತ್ತಿಲ ಒಬ್ಬರದ್ದಲ್ಲ, ಬದಲಾಗಿ ಇಲ್ಲಿರುವುದು ಸಮಾನ ಮನಸ್ಕರ ಸಶಕ್ತ ತಂಡ. ದೇಶ ಭಕ್ತ ಮೋದಿಯನ್ನು ಕಳೆದುಕೊಳ್ಳಲು ಪುತ್ತಿಲ ಪರಿವಾರ ಎಂದಿಗೂ ಬಯಸುವುದಿಲ್ಲ. ಅರುಣ್ ಪುತ್ತಿಲ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ರಾಜ್ಯ ನಾಯಕರು ಉತ್ಸಾಹ, ಕಾತರದಲ್ಲಿದ್ದರೂ ಪುತ್ತೂರಿನ ಬೆರಳೆಣಿಕೆಯ ಸ್ಥಾಪಿತ ಹಿತಾಸಕ್ತಿಗಳು ತಡೆಯಾಗುತ್ತಿದ್ದಾರೆ ಎಂದರು.

ಸಂಘವನ್ನು, ಪಕ್ಷವನ್ನು ಬಿಟ್ಟವರು ಸಿಕ್ಕಾಪಟ್ಟೆ ಬೈದ ಉದಾಹರಣೆಗಳಿವೆ. ಆದರೆ, ಅರುಣ್ ಕುಮಾರ್ ಪುತ್ತಿಲ ಇಂತಹ ಕೆಲಸವನ್ನು ಎಲ್ಲಿಯೂ ಮಾಡದೆ ಗೌರವಯುತವಾಗಿ ನಡೆದುಕೊಂಡಿದ್ದಾರೆ ಎಂದರು.

ಅರುಣ್ ಕುಮಾ‌ರ್ ಪುತ್ತಿಲ ಮಾತನಾಡಿ, ನಾವೆಲ್ಲರೂ ಕೂಡಾ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು. ರಾಷ್ಟ್ರೀಯ ವಿಚಾರಧಾರೆಯ ಜೊತೆ ನಮ್ಮ ಬದುಕು ಸಾಗಿ ಬಂದಿದೆ. ವಿಧಾನಸಭಾ ಚುನಾವಣೆಗೆ ಕಾರ್ಯಕರ್ತರ ಆಸೆಯಂತೆ ಹೆಜ್ಜೆ ಇಟ್ಟಿದ್ದೆವು. ಪ್ರಸ್ತುತ ಸನ್ನಿವೇಶದಲ್ಲಿ ಪಕ್ಷದ ಮತ್ತು ಸಂಘದ ಹಿರಿಯರ ಯೋಚನೆಯಂತೆ ನಡೆಯಲಿದ್ದೇವೆ. ಮುಂದಿನ ನಡೆಗೆ ಕಾರ್ಯಕರ್ತರ ವಿರೋಧ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಹಲವು ರೀತಿಯಲ್ಲಿ ಮಾತುಕತೆಗಳು ನಡೆದರೂ ಸ್ಪಷ್ಟತೆ ಸಿಕ್ಕಿಲ್ಲ. ಪಕ್ಷದಲ್ಲಿ ಜವಾಬ್ದಾರಿ ನೀಡುವ ಕುರಿತು ಮುಂದಿನ ಮೂರು ದಿನಗಳಲ್ಲಿ ಮಾತೃ ಪಕ್ಷದ ಕಡೆಯಿಂದ ನಿರ್ಧಾರ ಘೋಷಣೆಯಾಗಬೇಕು. ಈ ನಿಟ್ಟಿನಲ್ಲಿ ಅವರಿಗೆ ತುಳುನಾಡಿನ ದೈವ, ದೇವರು ಬುದ್ದಿ ನೀಡಲಿ ಎಂದು ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು.

ಮೂರು ನಿರ್ಣಯಗಳು

ಮಾತೃ ಪಕ್ಷ ಬಿಜೆಪಿಯ ನಾಯಕರು, ಹಿರಿಯರು ಅಥವಾ ಸಂಘ ಪರಿವಾರದವರಿಗೆ ಅಗೌರವ ಉಂಟಾಗುವ ಯಾವುದೇ ಹೇಳಿಕೆ, ಮಾತುಗಳನ್ನು ಪುತ್ತಿಲ ಪರಿವಾರ ಅಥವಾ ಅರುಣ್ ಕುಮಾ‌ರ್ ಪುತ್ತಿಲ ಆಡದೇ ಇರುವುದರಿಂದ ಕ್ಷಮೆ ಕೇಳುವ ಪ್ರಶ್ನೆಯೇ ಬರುವುದಿಲ್ಲ.

ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಬಿಜೆಪಿಯ ಜವಾಬ್ದಾರಿಯುತ ವ್ಯಕ್ತಿ ಗೌರವಯುತವಾಗಿ ನೀಡಿದರೆ ಪುತ್ತಿಲ ಪರಿವಾರವನ್ನು ಬಿಜೆಪಿ ಜತೆ ವಿಲೀನಗೊಳಿಸಲಾಗುವುದು.

ಒಂದು ವೇಳೆ ಬಿಜೆಪಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗದಿದ್ದಲ್ಲಿ ಲೋಕಸಭಾ ಚುನಾವಣೆ ಸೇರಿದಂತೆ ಮುಂಬರುವ ಎಲ್ಲಾ ಚುನಾವಣೆಗಳಿಗೆ ಪುತ್ತಿಲ ಪರಿವಾರ ಸ್ಪರ್ಧೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.