ಬೆಳಗಾವಿಯಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಆನಂದ ಸ್ವಾಮಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಲಕ್ಷ್ಮಿ ಹೆಬ್ಬಾಳ್ಳರ್‌ ಅವರ ಗೆಲುವಿಗೂ ಕಾರಣರಾಗಿದ್ದರು.

ಬೆಳಗಾವಿ: 2013 ರಲ್ಲಿ ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದಿಂದ ಸ್ಪರ್ಧಿಸಿದ್ದ ಆನಂದ ಸ್ವಾಮಿ ಗಡ್ಡದೇವರಮಠ ಅವರಿಗೆ ಹಾವೇರಿ ಲೋಕಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಲಭಿಸಿದೆ.

ಹೆಸರಾಂತ ಉದ್ಯಮಿಯಾಗಿರುವ ಅವರು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು.

ಪ್ರಭಾವಿ ನಾಯಕರು ಹಾಗೂ ಅಪಾರ ಜನ ಬೆಂಬಲ ಹೊಂದಿರುವ ಕಾರಣಕ್ಕೆ ಇದೀಗ ಪಕ್ಷ ಅವರಿಗೆ ಹಾವೇರಿ ಲೋಕಸಭಾ ಮತಕ್ಷೇತ್ರದಲ್ಲಿ ಟಿಕೆಟ್ ನೀಡುವ ಮೂಲಕ ಲೋಕಸಭೆಗೆ ಕಳಿಸಲು ಮುಂದಾಗಿದೆ.

ಆನಂದಸ್ವಾಮಿಗಡ್ಡದೇವರಮಠ ಅವರನ್ನು ಕಾಂಗ್ರೆಸ್‌ ಪಕ್ಷ ಈ ಹಿಂದೆ ವಿಧಾನ ಪರಿಷತ್ ಚುನಾವಣೆಗೆ ತನ್ನ ಅಧಿಕೃತ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ವಿರುದ್ಧ ಸ್ಪರ್ಧಿಸಿದ್ದರು.

ಪ್ರಬಲ ರಾಜಕಾರಣಿಯಾಗಿ ವರ್ಚಸ್ಸು ಹೊಂದಿರುವ ಅವರು ಹಾವೇರಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಭರದ ತಯಾರಿ ಮಾಡಿಕೊಂಡಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಅವರು ರಣಕಣಕ್ಕೆ ಇಳಿದಿದ್ದರು.

ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ ಎರಡು ಬಾರಿ ಶಿರಹಟ್ಟಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅವರ ಪುತ್ರರಾಗಿರುವ ಆನಂದಸ್ವಾಮಿ ಗಡ್ಡದೇವರ ಮಠ ಅವರು ಈ ಹಿಂದೆ ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಕಾಂಗ್ರೆಸ್‌ ಪಕ್ಷ ಅವರ ಬದಲು ಲಕ್ಷ್ಮಿ ಹೆಬ್ಬಾಳ್ಳ‌ರ್ ಅವರಿಗೆ ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಲ್ಲಿ ಟಿಕೆಟ್ ಸಿಕ್ಕಿರಲಿಲ್ಲ. ಇದರಿಂದ ಬಂಡೆದ್ದ ಅವರು ಪಕ್ಷೇತರರಾಗಿ ಕಣಕ್ಕಿಳಿದು ಗಣನೀಯ ಪ್ರಮಾಣದ ಮತ ಪಡೆದಿದ್ದರು. ಆಗ ಅವರು ಸುಮಾರು 17,670 ಮತಗಳನ್ನು ಪಡೆದು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯ ಸೋಲಿಗೆ ಕಾರಣರಾಗಿದ್ದರು. ಬೆಳಗಾವಿಯಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಅವರು ನಂತರದ ದಿನಗಳಲ್ಲಿ ಅವರು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಳರ ಅವರ ಗೆಲುವಿಗೂ ಸಹಾ ಕಾರಣರಾಗಿದ್ದರು.