ಬೆಂಗಳೂರು : ರೇಣುಕಾ ಸ್ವಾಮಿ ಎಂಬುವರನ್ನು ಅಮಾನುಷವಾಗಿ ಕೊಲೆ ಮಾಡಿರುವ ಪ್ರಕರಣದಲ್ಲಿ ಪೊಲೀಸ್​​ ಕಸ್ಟಡಿಯಲ್ಲಿರುವ ನಟ ದರ್ಶನ್ ಹಾಗೂ ಆತನ ಸಹಚರರಿಗೆ ಕಾಮಾಕ್ಷಿ ಪಾಳ್ಯ ಪೊಲೀಸರು ಮಂಗಳವಾರ ರಾತ್ರಿಯ ಊಟಕ್ಕೆ ಚಿಕ್ಕಪೇಟೆ ಬಿರಿಯಾನಿ ತಂದುಕೊಟ್ಟಿದ್ದಾರೆ.

ದರ್ಶನ್​ ಮತ್ತು ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳಿದ್ದಾರೆ. ಅವರೆಲ್ಲರನ್ನೂ ನ್ಯಾಯಾಲಯ ಪೊಲೀಸರ ಕಸ್ಟಡಿಗೆ ನೀಡಿದೆ. ಪವಿತ್ರಾ ಸಾಂತ್ವನ ಕೇಂದ್ರದಲ್ಲಿ ಇದ್ದರೆ ಉಳಿದವರು ಕಾಮಾಕ್ಷಿಪಾಳ್ಯ ಪೊಲೀಸರ ವಶದಲ್ಲಿದ್ದಾರೆ. ರಾತ್ರಿಯ ಊಟಕ್ಕೆ ಪೊಲೀಸರು ಅವರೆಲ್ಲರಿಗೂ ಚಿಕ್ಕಪೇಟೆ ಬಿರಿಯಾನಿ ಪ್ಯಾಕೇಟ್​ಗಳನ್ನು ತೆಗೆದುಕೊಂಡು ಹೋಗಿರುವ ದೃಶ್ಯಗಳು ಸೆರೆಯಾಗಿವೆ.

ದೊಡ್ಡ ಪ್ರಮಾಣದಲ್ಲಿ ಬಿರಿಯಾನಿ ಪ್ಯಾಕೆಟ್​ಗಳನ್ನು ಕ್ಯಾರಿ ಬ್ಯಾಗ್​ನಲ್ಲಿ ತುಂಬಿಸಿಕೊಂಡು ಹೋಗಿದ್ದು, ಜತೆಗೆ ಎಲ್ಲರಿಗೂ ಮಿನರಲ್ ವಾಟರ್​ ನೀಡಲಾಗಿದೆ. ಆರೋಪಿಗಳು ಕೆಲವರು ಬೆಳಗ್ಗಿನಿಂದ ಬಂಧನ ಹಾಗೂ ಇನ್ನಿತರ ಕಾನೂನು ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಮೈಕೈ ನೋವು, ತಲೆ ನೋವು ಎಂದಿದ್ದು ಅವರೆಲ್ಲರಿಗೂ ಡೋಲೋ 650 ಮಾತ್ರೆಯನ್ನು ತಂದುಕೊಟ್ಟಿದ್ದಾರೆ.

ಆರೋಪಿಗಳನ್ನು ಸರಿಯಾಗಿ ನೋಡಿಕೊಳ್ಳುವುದು ಪೊಲೀಸರಿಗೆ ಅನಿವಾರ್ಯ. ಹೀಗಾಗಿ ಅವರ ಊಟ, ತಿಂಡಿ ಹಾಗೂ ಇನ್ನಿತರ ಉಪಚಾರಗಳನ್ನು ಮಾಡಲು ಪೊಲೀಸರ ತಂಡ ನಾನಾ ರೀತಿಯ ಶ್ರಮ ಹಾಕುತ್ತಿದೆ.

ಹಾಸಿಗೆ, ತಲೆದಿಂಬು
ಆರೋಪಿ ನಂಬರ್ 1 ದರ್ಶನ್ ಹಾಗೂ ಉಳಿದ ಆರೋಪಿಗಳಿಗೆ ಪೊಲೀಸರು ರಾತ್ರಿ ವೇಳೆ ಮಲಗಲು ಹಾಸಿಗೆ ಹಾಗೂ ತಲೆ ದಿಂಬು ವ್ಯವಸ್ಥೆಯನ್ನೂ ಮಾಡಿದ್ದಾರೆ. 9 ಗಂಟೆ ವೇಳೆಗೆ ಪೊಲೀಸರು ನಾನಾ ಕಡೆಯಿಂದ ಆರೋಪಿಗಳೆಲ್ಲರಿಗೂ ಮಲಗಲು ಕಾರ್ಪೆಟ್​, ಬೆಡ್​ಶೀಟ್​ ಹಾಗೂ ತಲೆ ದಿಂಬಿನ ವ್ಯವಸ್ಥೆ ಮಾಡಿದ್ದಾರೆ. ಆರು ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿರುವ ಪೊಲೀಸರಿಗೆ ಮುಂದಿನ ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ನಡುವೆ ಇಷ್ಟೊಂದು ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ.

ದರ್ಶನ್ , ಸೊಳ್ಳೆ ಕಡಿತಕ್ಕೆ ಬೆಚ್ಚಿ ರಾತ್ರಿಯೆಲ್ಲ ಎಚ್ಚರವಿದ್ದರು. ಕೊಲೆಯಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ದರ್ಶನ್ ಮತ್ತು ಆತನ ಸಹಚರಿಗೆ ಕಾಮಾಕ್ಷಿಪಾಳ್ಯ ಪೊಲೀಸರು ಬೇರೆ ಬೇರೆ ಲಾಕಪ್​ನಲ್ಲಿ ಮಲಗಲು ವ್ಯವಸ್ಥೆ ಮಾಡಿದ್ದರು. ಸೊಳ್ಳೆಗಳು ದರ್ಶನ್​ಗೆ ಇನ್ನಿಲ್ಲದಂತೆ ಕಾಟ ಕೊಟ್ಟವು.

ಕೊಲೆ ಆರೋಪ ಎದುರಿಸುತ್ತಿರುವ ದರ್ಶನ್ ಹಾಗೂ ಉಳಿದ 11 ಜನ ಆರೋಪಿಗಳು ಲಾಕ್ ಅಪ್ ನಲ್ಲೇ ಉಳಿಯಬೇಕಾಯಿತು. ದರ್ಶನ್‌, ರಾಘವೇಂದ್ರ ಮತ್ತು ವಿನಯ್ ಗೆ ಒಂದು ಲಾಕ್ ಅಪ್ ನಲ್ಲಿ ಮಲಗಲು ವ್ಯವಸ್ಥೆ ಮಾಡಿದ್ದರೆ, ಇತರ ಆರೋಪಿಗಳಿಗೆ ಮತ್ತೊಂದು ಲಾಕ್ ಅಪ್​ನಲ್ಲಿ ಮಲಗಲು ಹೇಳಿದ್ದರು. ರಾತ್ರಿ ಆರೋಪಿಗಳಿಗೆ ಖಾಸಗಿ ಹೋಟೆಲ್ ನಿಂದ ದೊನ್ನೆ ಬಿರಿಯಾನಿ‌ ವ್ಯವಸ್ಥೆ ಮಾಡಲಾಗಿತ್ತು. ಚೆನ್ನಾಗಿ ತಿಂದಿದ್ದ ಅವರು ಪೊಲೀಸರೇ ಒದಗಿಸಿದ್ದ ಹಾಸಿಗೆ ಪರಿಕರಗಳು, ಬೆಡ್ ಶೀಟ್, ತಲೆ ದಿಂಬು ಬಳಸಿ ಮಲಗಿದ್ದರು. ಆದರೆ, ಸೊಳ್ಳೆಗಳು ಅವುಗಳನ್ನು ಭೇದಿಸಿ ಬಂದು ಕಚ್ಚಿದ್ದವು.

ದರ್ಶನ್​
ಸೊಳ್ಳೆ ಕಡಿತದ ಜತೆಗೆ ದರ್ಶನ್​ ಸಿಕ್ಕಾಪಟ್ಟೆ ಚಿಂತೆಯಲ್ಲಿ ಇದ್ದಂತೆ ಕಂಡು ಬಂತು. ಲಾಕ್​ಅಪ್​ನೊಳಗೆ ಆಗಾಗ ಎಚ್ಚರಗೊಂಡು ಕುಳಿತಿರುತ್ತಿದ್ದರು. ಆರಾಮವಾಗಿ ಎಸ್ಟೇಟ್​, ಬಂಗಲೆಯಲ್ಲಿ ಮಲಗುತ್ತಿದ್ದ ದರ್ಶನ್​ಗೆ ಜೈಲು ವಾಸ ಚಿಂತೆಯನ್ನು ಉಂಟು ಮಾಡಿತ್ತು.