ಬೆಳಗಾವಿ :
ಜಿಲ್ಲೆಯ ಕೆಲವೆಡೆ ಜನವಸತಿ ಪ್ರದೇಶಗಳಲ್ಲಿರುವ ಕೆಲವು ಕಾರ್ಖಾನೆಗಳಿಂದ ಪರಿಸರ ಮಾಲಿನ್ಯವಾಗುತ್ತಿದೆ ಎಂದು ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರುಗಳು ಬರುತ್ತಿವೆ. ಆದ್ದರಿಂದ ಅಧಿಕಾರಿಗಳು ಅಂತವುಗಳನ್ನು ಪರಿಶೀಲಿಸಿ ಮಾಲಿನ್ಯ ನಿಯಂತ್ರಣ ಅಥವಾ ಕಾರ್ಖಾನೆಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಂಬಂಧಿಸಿದ ಸಭೆಯಲ್ಲಿ ಅವರು ಮಾತನಾಡಿದರು.

ಖನಿಜ ಸಾಗಾಣಿಕೆ ವಾಹನಗಳಿಗೆ ಜಿಪಿಎಸ್:

ಸರ್ಕಾರದಿಂದ ರಾಜ್ಯಾದ್ಯಂತ ಖನಿಜ ಸಾಗಾಣಿಕೆ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಲು ಸೂಚಿಲಾಗಿತ್ತು. ಅದರಂತೆ ಬೆಳಗಾವಿ ಜಿಲ್ಲೆಯಲ್ಲಿ 1636 ವಾಹನಗಳಿಗೆ ಜಿಪಿಎಸ್ ಅಳವಡಿಸಿ, ಅವುಗಳ ಚಾಲನೆ ಮತ್ತು ಪರಿಶೀಲನೆ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದರು.

ಕಂಟ್ರೋಲ್ ರೂಂ ನಲ್ಲಿ ಮಾಹಿತಿಯನ್ನು ಪರಿಶೀಲಿಸಿ ನಿಯಮ ಉಲ್ಲಂಘನೆ ಮಾಡಿರುವ ವಾಹನಗಳಿಗೆ ಕೇಂದ್ರ ಕಚೇರಿಯ ಆದೇಶದಂತೆ ಪ್ರತಿ ವಾಹನಗಳಿಗೆ 10 ಸಾವಿರ ದಂಡ ವಿಧಿಸಲಾಗುತ್ತಿದೆ ಎಂದು ಹೇಳಿದರು.

ಅದರಂತೆ ಜಿಲ್ಲೆಯ 60 ವಾಹನಗಳಿಗೆ ದಂಡ ವಿಧಿಸಿ, ನೋಟಿಸ್ ಜಾರಿ ಮಾಡಲಾಗಿದೆ. ದಂಡ ಸಂದಾಯಿಸದೇ ಇದ್ದ ವಾಹನಗಳಿಗೆ ಸಾರಿಗೆ ಇಲಾಖೆಯವರು ದಂಡ ಸಂದಾಯಿಸಲು ಸಹಕಾರ ನೀಡುತ್ತಿದ್ದಾರೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ವಿವರಿಸಿದರು.

ಸಾರ್ವಜನಿಕ ಕಾಮಗಾರಿಗಳಿಗೆ ಬಳಸುವ ಖನಿಜದ ಬಗ್ಗೆ ಕಾಮಗಾರಿ ಗುತ್ತಿಗೆ ನೀಡುವ ಸಂಸ್ಥೆಯವರು ಗುತ್ತಿಗೆದಾರರು ಕಡ್ಡಾಯವಾಗಿ ಎಂಡಿಪಿ ಮುಖಾಂತರ ಖನಿಜ ಸಾಗಾಣಿಕೆ ಮಾಡುತ್ತಾರೆ.

ಕೆ.ಎಸ್.ಆರ್.ಎಸ್.ಎ.ಸಿ ಅವರಿಂದ ರಾಜ್ಯದ ಎಲ್ಲ ಕಲ್ಲು ಗಣಿ ಗುತ್ತಿಗೆಗಳ ಡ್ರೋನ್ ಸಮೀಕ್ಷೆ ನಡೆಸಿ reduced level ನಮೂದಿಸಲು ಸೂಚಿಸಿದ್ದು, ಅದರಂತೆ ಬೆಳಗಾವಿ ಜಿಲ್ಲೆಯಲ್ಲಿಯೂ ಸಹ ಎಲ್ಲ ಕಲ್ಲು ಗಣಿ ಗುತ್ತಿಗೆಯ ಕ್ಷೇತ್ರವಾರು ಗುತ್ತಿಗೆದಾರ ಸಮ್ಮುಖದಲ್ಲಿ ಡ್ರೋನ್ ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಪ್ರೊಬೇಷನರಿ ಐಎಎಸ್ ಅಧಿಕಾರಿ ಶುಭಂ ಶುಕ್ಲಾ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಸುಮಿತ್ರಾ, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಚಿಕ್ಕೋಡಿ ವಿಭಾಗದ ಪರಿಸರ ಅಧಿಕಾರಿ ಶೋಭಾ, ಬೆಳಗಾವಿ ವಿಭಾಗದ ಪರಿಸರ ಅಧಿಕಾರಿ ವಿ. ರಮೇಶ, ಅರಣ್ಯ ಇಲಾಖೆ, ಜಿಲ್ಲಾ ಪಂಚಾಯತ್, ಸಾರಿಗೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.