ಬೆಂಗಳೂರು : ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಕೇವಲ ಆರಂಭವಷ್ಟೇ. ಲೋಕಸಭೆ ಚುನಾವಣೆಯಲ್ಲಿ ಜನರ ಮನಸ್ಥಿತಿ ಏನು ಎಂಬುದಕ್ಕೆ ಈ ಫಲಿತಾಂಶ ಸಾಕ್ಷಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಮಂಗಳವಾರ ಸಂಜೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು:
“ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಈ ಚುನಾವಣೆಯನ್ನು ರಾಜ್ಯ ರಾಜಕೀಯದ, ಮುಂದಿನ ಲೋಕಸಭೆ ಚುನಾವಣೆಯ ದಿಕ್ಸೂಚಿ ಎಂದು ಬಣ್ಣಿಸುತ್ತಿದ್ದರು. ಇಂದು ಪ್ರಜ್ಞಾವಂತ ಶಿಕ್ಷಕರು ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಪುಟ್ಟಣ್ಣ ಅವರಿಗೆ ಅಭಿನಂದನೆ ಹಾಗೂ ಮತದಾರರಿಗೆ ಧನ್ಯವಾದ ಸಲ್ಲಿಸುತ್ತೇನೆ.
ರಾಜ್ಯ ಹಾಗೂ ಸರ್ಕಾರಕ್ಕೆ ಇಂದು ವಿಶೇಷವಾದ ದಿನ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆದಿದೆ. ಹಿಂದೆ ಪುಟ್ಟಣ್ಣ ಅವರೇ ಬಿಜೆಪಿಯಿಂದ ಗೆದ್ದಿದ್ದರು. ಅದು ಬಿಜೆಪಿಯ ಕ್ಷೇತ್ರವಾಗಿತ್ತು. ಆದರೆ ಅವರು ಈ ಮೈತ್ರಿಯಿಂದ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟು, ಮೈತ್ರಿ ಮಾಡಿಕೊಂಡು ಅಭ್ಯರ್ಥಿ ಕಣಕ್ಕಿಳಿಸಿದ್ದರು.
ಪುಟ್ಟಣ್ಣ ಅವರು ಸತತವಾಗಿ ಐದನೇ ಬಾರಿಗೆ ಗೆದ್ದಿದ್ದಾರೆ. ಅವರು ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದ ಪರವಾಗಿ ಕೆಲಸ ಮಾಡುತ್ತಿದ್ದಾರೆ.
ಬೆಳಗಾವಿಯಲ್ಲಿ ಪ್ರಕಾಶ್ ಹುಕ್ಕೇರಿ, ಮಂಡ್ಯದಲ್ಲಿ ಮಧು ಮಾದೇಗೌಡ ಅವರು ಗೆದ್ದಿದ್ದರು. ಈ ಫಲಿತಾಂಶದ ಮೂಲಕ ವಿದ್ಯಾವಂತ ಹಾಗೂ ಪ್ರಜ್ಞಾವಂತ ಮತದಾರರು ರಾಜ್ಯದಲ್ಲಿ ಬದಲಾವಣೆ ಬಯಸಿ ಕಾಂಗ್ರೆಸ್ ಪಕ್ಷದ ಪರವಾಗಿ ನಿಂತಿದ್ದಾರೆ. ಇದು ಹೆಮ್ಮೆ ತಂದಿದ್ದು, ಇವರ ಸೇವೆ ನಾವು ಮಾಡುತ್ತೇವೆ. ಪುಟ್ಟಣ್ಣ ಅವರು ಶಿಕ್ಷಕರ ಪರವಾಗಿ ಎತ್ತುವ ಧ್ವನಿಗೆ ನಾವು ಆದ್ಯತೆ ನೀಡುತ್ತೇವೆ.
ನಮ್ಮ ಸರ್ಕಾರ ಈಗಾಗಲೇ ನಿರುದ್ಯೋಗ ಪದವೀಧರರಿಗೆ ಯುವನಿಧಿ ಮೂಲಕ ನಿರುದ್ಯೋಗ ಭತ್ಯೆ ನೀಡುತ್ತಿದೆ.
ನಮಗೆ ಬೆಂಬಲವಾಗಿ ನಿಂತ ಕಾರ್ಯಕರ್ತರು, ಶಿಕ್ಷಣ ಆಡಳಿತ ಮಂಡಳಿಗಳು, ಮುಖಂಡರಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಧನ್ಯವಾದ ಸಲ್ಲಿಸುತ್ತೇನೆ.”
ಅಧಿಕಾರಿಗಳ ದುರ್ಬಳಕೆಯಾಗಿದೆ ಎಂಬ ಮೈತ್ರಿ ಅಭ್ಯರ್ಥಿ ಹೇಳಿಕೆ ಬಗ್ಗೆ ಕೇಳಿದಾಗ, “ಸೋತವರು ಏನು ಹೇಳಲು ಸಾಧ್ಯ? ಬಿದ್ದರು ಮೀಸೆ ಮಣ್ಣಾಗಲಿಲ್ಲ” ಎಂಬ ಗಾದೆ ಇದೆ. ಅವರು ಎಲ್ಲಾ ಪ್ರಯತ್ನ ಮಾಡಿದ್ದಾರೆ” ಎಂದು ತಿಳಿಸಿದರು.
ರಾಜ್ಯಸಭೆ ಚುನಾವಣೆಗೆ ಆಮಿಷ ನೀಡುತ್ತಿರುವ ಬಗ್ಗೆ ಕಾಂಗ್ರೆಸ್ ಶಾಸಕರು ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಬಗ್ಗೆ ಕೇಳಿದಾಗ, “ನನಗೂ ಈ ವಿಚಾರವಾಗಿ ಮಾಹಿತಿ ಬಂದಿವೆ. ತನಿಖಾ ತಂಡ ಇದರ ತನಿಖೆ ಮಾಡಲಿದೆ” ಎಂದು ತಿಳಿಸಿದರು.