ದೆಹಲಿ : ಖ್ಯಾತ ಸಾಂವಿಧಾನಿಕ ನ್ಯಾಯಶಾಸ್ತ್ರಜ್ಞ ಮತ್ತು ಸುಪ್ರೀಂ ಕೋರ್ಟ್‌ನ ಹಿರಿಯ ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ಅವರು ಬುಧವಾರ ನವದೆಹಲಿಯಲ್ಲಿ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.
ಫಾಲಿ ನಾರಿಮನ್ ಅವರು ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಹಾಗೂ ತಮಿಳುನಾಡು ಜೊತೆಗಿನ ಕಾವೇರಿ ಜಲವಿವಾದದಲ್ಲಿ ಕರ್ನಾಟಕಕ್ಕೆ ಅತ್ಯಮೂಲ್ಯ ಸಲಹೆ ಸೂಚನೆ ನೀಡುತ್ತಿದ್ದರು. ಅವರ ಸಲಹೆ ಮೇರೆಗೆ ಕರ್ನಾಟಕ ಸರಕಾರ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿತ್ತು. ಈ ಮೂಲಕ ಅವರು ಅಪ್ರತಿಮ ನ್ಯಾಯಶಾಸ್ತ್ರಜ್ಞ ಎಂದು ಗುರುತಿಸಿಕೊಂಡಿದ್ದರು.
ಅವರು ನವೆಂಬರ್ 1950 ರಲ್ಲಿ ಬಾಂಬೆ ಹೈಕೋರ್ಟ್‌ನ ವಕೀಲರಾಗಿ ಮತ್ತು 1961 ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು. ಅವರು 70 ವರ್ಷಗಳಿಗೂ ಹೆಚ್ಚು ಕಾಲ ಕಾನೂನು ಅಭ್ಯಾಸ ಮಾಡಿದ್ದಾರೆ. ಆರಂಭದಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ಮತ್ತು 1972 ರಿಂದ, ಹೊಸ ದೆಹಲಿಯಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯ. ಮೇ 1972 ರಲ್ಲಿ ಅವರು ಬಾಂಬೆಯಿಂದ ದೆಹಲಿಗೆ ಸ್ಥಳಾಂತರಗೊಂಡಾಗ ಅವರು ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡಿದ್ದರು.
ಮ್ಯಾನ್ಮಾರ್‌ನ ಯಾಂಗೋನ್‌ನಲ್ಲಿ 1929ರ ಜನವರಿ 10ರಂದು ಜನಿಸಿದ ಫಾಲಿ ನಾರಿಮನ್, 1971ರಿಂದ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ. 1991ರಿಂದ 2010ರವರೆಗೆ ಭಾರತೀಯ ಬಾರ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿದ್ದರು. ಇವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮವಿಭೂಷಣ (2007) ಹಾಗೂ ಪದ್ಮಭೂಷಣ (1991) ಪ್ರಶಸ್ತಿ ದೊರೆತಿವೆ.
ತುರ್ತು ಪರಿಸ್ಥಿತಿ ವಿರುದ್ಧ ಪ್ರತಿಭಟನೆ :
ಫಾಲಿ ನಾರಿಮನ್ ಅವರು ಕಾನೂನು ಪಾಂಡಿತ್ಯದ ಜತೆಗೆ ವ್ಯವಸ್ಥೆ ವಿರುದ್ಧ ಹೋರಾಡುವ ಛಾತಿ ಹೊಂದಿದ್ದರು. 1975ರಲ್ಲಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದಾಗ, ಅದನ್ನು ಪ್ರತಿಭಟಿಸಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಹುದ್ದೆಗೆ ಫಾಲಿ ನಾರಿಮನ್ ಅವರು ಕೂಡಲೇ ರಾಜೀನಾಮೆ ನೀಡಿದ್ದರು. ಆ ಮೂಲಕ ಇಂದಿರಾ ಗಾಂಧಿ ಅವರ ವಿರುದ್ಧ ಪ್ರತಿಭಟನೆ ಸಾರಿದ್ದರು.
ಫಾಲಿ ಎಸ್ ನಾರಿಮನ್ ಅವರು ಕರ್ನಾಟಕ ಹಾಗೂ ತಮಿಳುನಾಡು ಮಧ್ಯೆ ಇರುವ ಕಾವೇರಿ ನದಿ ನೀರು ಬಿಕ್ಕಟ್ಟಿಗೆ ಸಂಬಂಧಿಸಿದಂತೆ ರಾಜ್ಯದ ಪರ ಹಲವು ಬಾರಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ. ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (NJAC), ಟಿಎಂಎ ಪೈ ಪ್ರಕರಣ, ಕೊಲಿಜಿಯಂ ವ್ಯವಸ್ಥೆ ಸೇರಿ ಹಲವು ಐತಿಹಾಸಿಕ ಪ್ರಕರಣಗಳಲ್ಲಿ ಫಾಲಿ ನಾರಿಮನ್ ಅವರು ವಾದ ಮಂಡಿಸಿ ಸೈ ಎನಿಸಿಕೊಂಡಿದ್ದರು. ಇವರ ಪುತ್ರ ರೋಹಿಂಗ್ಟನ್ ನಾರಿಮನ್ ಅವರು ಕೂಡ ವಕೀಲರಾಗಿದ್ದಾರೆ. ಫಾಲಿ ನಾರಿಮನ್ ಅವರ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.