ಕಡಲತೀರದಲ್ಲಿ ಸಂರಕ್ಷಿಸಲ್ಪಟ್ಟ ಕಡಲಾಮೆ ಮೊಟ್ಟೆಗಳಿಂದ ಹೊರಗಡೆ ಬಂದ ಕಡಲಾಮೆ ಮರಿಗಳಾಗಿದ್ದವು. ಪುಟ್ಟ ಪುಟ್ಟ ಮರಿಗಳು ಸಮುದ್ರ ಸೇರುವ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಹಲವರು ಸಾಕ್ಷಿಯಾದರು. ಮೊಟ್ಟೆ ಸಂರಕ್ಷಣೆಯ ಗೂಡುಗಳಿಂದ ಸುರಕ್ಷಿತವಾಗಿ ಮರಿಗಳನ್ನು ಹೊರಕ್ಕೆ ತೆಗೆಯುತ್ತಿದ್ದಂತೆ ಅವುಗಳ ಚಿನ್ನಾಟ ವೀಕ್ಷಿಸಲು ಕುತೂಹಲ ಭರಿತರಾಗಿ ಗಮನಿಸುತ್ತಿದ್ದರು. ಒಂದೊಂದೇ ಮರಿಗಳನ್ನು ಸುರಕ್ಷಿತವಾಗಿ ಹೊರಕ್ಕೆ ತೆಗೆದು ಮರಳಿನ ಮೇಲೆ ಇಡುತ್ತಿದ್ದಂತೆ ಅವು ಸಮುದ್ರದತ್ತ ಓಡುತ್ತ ಸಾಗಿದ್ದವು.
ಕಾರವಾರ : ಕಾರವಾರದ ದೇವಭಾಗ ಕಡಲ ತೀರದಲ್ಲಿ ಕಾರವಾರ ಅರಣ್ಯ ವಿಭಾಗದ ಕೋಸ್ಟಲ್ ಮತ್ತು ಮರೈನ್ ಇಕೋ-ಸಿಸ್ಟಮ್ ಸೆಲ್ ವತಿಯಿಂದ ಸಂರಕ್ಷಿಸಲ್ಪಟ್ಟ ಮೊಟ್ಟೆಗಳಿಂದ ಒಡೆದು ಹೊರಬಂದ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಬಿಡಲಾಯಿತು.
ಉಪ ಲೋಕಾಯುಕ್ತ ನ್ಯಾ.ಕೆ.ಎನ್. ಫಣೀಂದ್ರ ಉಪ ಲೋಕಾಯುಕ್ತರ ಉಪ ನಿಬಂಧಕರಾದ ರಾಜಶೇಖರ, ಚನ್ನಕೇಶವ ರೆಡ್ಡಿ, ಆಪ್ತ ಕಾರ್ಯದರ್ಶಿ ಕಿರಣ ಪಾಟೀಲ್, ಜಿಲ್ಲಾ ಲೋಕಾಯುಕ್ತ ಎಸ್ಪಿ ಕುಮಾರಚಂದ್ರ ಸಮಕ್ಷಮ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಭಾನುವಾರ ಸಂಜೆ ಬಿಡಲಾಯಿತು.
ಕಳೆದ ಸಾಲಿನಿಂದ ಕಾರವಾರ ವಿಭಾಗದ ವ್ಯಾಪ್ತಿಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆ ೧೯೭೨ರಲ್ಲಿ ಸಂರಕ್ಷಿಸಲ್ಪಟ್ಟ ಕಡಲಾಮೆಗಳಲ್ಲಿ ಆಲೀವ್ ರಿಪ್ಲೇ ಜಾತಿಯ ಕಡಲಾಮೆಗಳು ರಾಜ್ಯದ ಕರಾವಳಿಯಲ್ಲಿ ಮೊಟ್ಟೆ ಇಟ್ಟು ಹೊಗುತ್ತಿವೆ. ಇಲಾಖೆಯು ಅವಗಳನ್ನು ಸಂರಕ್ಷಿಸಿ ಮರಿಗಳು ಸಮುದ್ರ ಸೇರುವ ಮಹತ್ವದ ಕಾರ‍್ಯವನ್ನು ಮಾಡುತ್ತಿದೆ. ಈ ಸಾಲಿನಲ್ಲಿ ಸುಮಾರು ೧೦೦ ಕ್ಕೂ ಅಧಿಕ ಗೂಡುಗಳು ಕಾರವಾರ, ಅಂಕೋಲಾದ ವಿವಿಧ ಕಡಲ ತೀರದಲ್ಲಿ ಈಗಾಗಲೇ ಸಂರಕ್ಷಸಿಲ್ಪಟ್ಟಿವೆ.
ನಿನ್ನೆ ಇಂತಹದೆ ಗೂಡುಗಳಿಂದ ಮರಿಗಳು ಹೊರ ಬರುತ್ತಿರುವ ಮಾಹಿತಿ ಪಡೆದು, ಕಾರವಾರಕ್ಕೆ ಕಾರ್ಯನಿಮಿತ್ತ ಆಗಮಿಸಿರುವ ಉಪ ಲೋಕಾಯುಕ್ತ ನ್ಯಾಯಮೂರ್ತಿ ಅವರ ತಂಡ ಸ್ಥಳಕ್ಕೆ ಆಗಮಿಸಿ ಕಡಲಾಮೆಗಳ ಮರಿಗಳನ್ನು ಸಮುದ್ರಕ್ಕೆ ಸೇರಿಸುವ ಕಾರ‍್ಯಕ್ಕೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ ಸಿ. ರವರು ಕಡಲಾಮೆ ಸಂರಕ್ಷಣೆಯಲ್ಲಿ ಇಲಾಖೆಯ ಕಾರ‍್ಯದ ಕುರಿತು ಮಾಹಿತಿ ನೀಡಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಯೇಶ್ ಕೆ.ಸಿ., ವಲಯ ಅರಣ್ಯಾಧಿಕಾರಿಗಳಾದ ಪ್ರಮೋದ ಬಿ. ಕಿರಣ, ಗಜಾನನ ನಾಯ್ಕ, ವಿಶ್ವನಾಥ ನಾಯ್ಕ, ಉಪ ವಲಯ ಅರಣ್ಯಾಧಿಕಾರಿಗಳಾದ ಚಂದ್ರಶೇಖರ್ ಕಟ್ಟಿಮನಿ, ಪ್ರಕಾಶ ಯರಗಟ್ಟಿ, ಜಿ. ಐ ನಾಯಕ, ಅರಣ್ಯ ಪಾಲಕರಾದ ಮಲ್ಲೇಶ, ಹನಮಂತ, ಸಂಶೋಧನಾ ವಿದ್ಯಾರ್ಥಿ ಶಾನ್ ನವಾಜ್ ಹಾಗೂ ಕಾರವಾರ, ಗೋಪಿಸಿಟ್ಟ ವಲಯದ ಸಿಬ್ಬಂದಿ ಪಾಲ್ಗೊಂಡಿದ್ದರು.
ಟಾಗೋರ, ದೇವಭಾಗ, ಮಾಜಾಳಿ ಕಡಲತೀರವು ಕಡಲಾಮೆಗಳ ಮೊಟ್ಟೆಯಿಡುವ ನೆಚ್ಚಿನ ತಾಣಗಳಲ್ಲಿ ಒಂದಾಗಿವೆ. ನವೆಂಬರನಿಂದ ಮಾರ್ಚವರೆಗೆ ಕಡಲಾಮೆಗಳು ಮೊಟ್ಟೆಯಿಡುವ ಕಾಲವಾಗಿದೆ. ಕಡಲಾಮೆ ಸಂರಕ್ಷಣೆಯ ಜಾಗೃತಿಯ ಭಾಗವಾಗಿ ಕಾರವಾರ ಅರಣ್ಯ ವಿಭಾಗದ ಕೋಸ್ಟಲ್ ಮತ್ತು ಮರೈನ್ ಇಕೋ ಸಿಸ್ಟಮ್ ಘಟಕದ ವತಿಯಿಂದ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.