ಹಾಸನ : ಪ್ರಧಾನಿ ನರೇಂದ್ರ ಮೋದಿ ಮತ್ತು ನನ್ನದು ಯಾವುದೋ ಜನ್ಮಾಂತರದ ಸಂಬಂಧ. ನನ್ನ ಬಗ್ಗೆ ಬಗ್ಗೆ ಅವರು ತುಂಬಾ ಗೌರವ ಇಟ್ಟುಕೊಂಡಿದ್ದಾರೆ. ಅದೇ ಕಾಂಗ್ರೆಸ್ ನನ್ನನ್ನು ಅಧಿಕಾರದಿಂದ ಕಿತ್ತು ಹಾಕಿತು. ನಾನು ಒಂದೇ ಒಂದು ರುಪಾಯಿ ದುರುಪಯೋಗ ಮಾಡಿಲ್ಲ. ಇಡೀ ಹಿಂದುಸ್ತಾನದಲ್ಲಿ ನನ್ನ ಬಗ್ಗೆ ಯಾರೂ ಆರೋಪ ಮಾಡಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ನಗರದಲ್ಲಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರ 5 ವರ್ಷಗಳ ಅವಧಿಯಲ್ಲಿ ಮಾಡಿರುವ ಸಾಧನೆಗಳನ್ನೊಳ ಗೊಂಡ ಪುಸ್ತಕವನ್ನು ಗುರುವಾರ ಬಿಡುಗಡೆ ಮಾಡಿ ದೇವೇಗೌಡ ಮಾತನಾಡಿದರು. ಹಾಸನದಲ್ಲಿ ಸಮಸ್ಯೆಗಳು ಸಾಕಷ್ಟು ಇದೆ. ಆದರೂ ಪ್ರಜ್ವಲ್ ಶಕ್ತಿಮೀರಿ ಸಾಕಷ್ಟು ಕೆಲಸ ಮಾಡಿದ್ದಾರೆ. ಈ ಚುನಾವಣೆಯಲ್ಲಿ ನಮ್ಮ ಮೇಲೆ ಗದಾ ಪ್ರಹಾರ ಮಾಡುತ್ತಿದ್ದಾರೆ. ವಾರದ ಹಿಂದೆ ಕಾಂಗ್ರೆಸ್ಸಿಗರು ಅರಸೀಕೆರೆ, ಹಾಸನದಲ್ಲಿ ಸಭೆ ಮಾಡಿದ್ದಾರೆ. ಹಾಸನದ ಮೆಡಿಕಲ್ ಕಾಲೇಜು ನೂತನ ಕಟ್ಟಡ ಉದ್ಘಾಟನೆ
ಮಾಡಿದ್ದಾರೆ. ಆದರೆ ಈ ಕಾಲೇಜು ಆಗಿದ್ದು ಯಾವಾಗ? ಮೆಡಿಕಲ್ ಕಾಲೇಜು ಉಳಿಸಲು ರೇವಣ್ಣ ಮಾಡಿದ ಪ್ರಯತ್ನ ಗೊತ್ತಿದೆಯಾ? ಎಂದರು.

ಇತ್ತೀಚೆಗೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಅವರು ನಮ್ಮ ಅವಧಿಯಲ್ಲಿ ಆದ ಕೆಲಸಗಳನ್ನು ಈಗ ಉದ್ಘಾಟನೆ ಮಾಡುತ್ತಿದ್ದಾರೆ. ಪ್ರಜ್ವಲ್ ಮಾಡಿರೋ ಕೆಲಸ ಜನರಿಗೆ ಮುಟ್ಟಿಸಲು ನಾವು ಹಿಂದೆ ಬಿದ್ದರೆ ಮುಂದಿನ 100 ದಿನಗಳಲ್ಲಿ ನಮ್ಮ ಎದುರಾಳಿಗಳು ನಮ್ಮನ್ನು ರಾಜಕೀಯವಾಗಿ ಮುಗಿಸುತ್ತಾರೆ. ಇಷ್ಟೆಲ್ಲಾ ಕೆಲಸ ಮಾಡಿರೋ ಸಂಸದರನ್ನು ಸೋಲಿಸಲೇಬೇಕು ಎಂದು ಕೆಲಸ ಮಾಡುತ್ತಿದ್ದಾರೆ. ನಾನು ಪ್ರಧಾನಿಯಾಗಿ ದೇಶದ ಹಲವಾರು ಸಮಸ್ಯೆ ಬಗೆಹರಿಸಿದ್ದೇನೆ. ನೇಗಿಲ ಗೆರೆ ಪುಸ್ತಕ ಓದಬೇಕು. ನನಗೆ ಇನ್ನೂ ಎರಡು ವರ್ಷ ರಾಜ್ಯ ಸಭೆ ಅವಕಾಶ ಇದೆ. ನಾನು ಪ್ರಜ್ವಲ್ ಹಿಂದೆ ನಿಲ್ಲುತ್ತೇನೆ. ಸಲಹೆ ಕೊಡುತ್ತೇನೆ ಎಂದರು.