ಬೆಂಗಳೂರು :
ಬಾಕಿ ವೇತನ ಪಾವತಿ ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಡಯಾಲಿಸಿಸ್‌ ಕೇಂದ್ರಗಳ ಸಿಬ್ಬಂದಿಗಳು ಇಂದಿನಿಂದ ಸೇವೆ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.

ರಾಜ್ಯದ ಎಲ್ಲಾ ಡಯಾಲಿಸಿಸ್ ಕೇಂದ್ರಗಳು ಬಂದ್ ಆಗಿದ್ದು ರೋಗಿಗಳು ಪರದಾಡುವ ಸ್ಥಿತಿ ಎದುರಾಗಿದೆ. ಎರಡೂವರೆ ವರ್ಷಗಳ ಹಿಂದೆ ಸರ್ಕಾರ ಕೊರೊನಾ ಕಾರಣ ನೀಡಿ ಈ ನೌಕರರ ವೇತನವನ್ನು ಅರ್ಧಕ್ಕೆ ಇಳಿಸಿತ್ತು. ಈಗ ಹಾಲಿ ಸರ್ಕಾರ ವೇತನವನ್ನು 3 ತಿಂಗಳುಗಳಿಂದ ತಡೆಹಿಡಿದಿದ್ದು ನೌಕರರು ಪರದಾಡುವಂತೆ ಆಗಿದೆ.

ಆದರೆ ಸರಕಾರ ಈ ನಿಟ್ಟಿನಲ್ಲಿ ಸಿಬ್ಬಂದಿಗಳ ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ತಿಳಿಸಿದ್ದಾರೆ.

ರಾಜ್ಯದ ಡಯಾಲಿಸಿಸ್‌ ಕೇಂದ್ರಗಳ 650 ಸಿಬ್ಬಂದಿಗಳ ಅಗಸ್ಟ್ ನಲ್ಲಿ ಪ್ರತಿಭಟನೆ ನಡೆಸಿದ್ದರು. ಆಗ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದ ಆರೋಗ್ಯ ಇಲಾಖೆ ನಂತರ ಈ ಸಮಸ್ಯೆ ಬಗೆಹರಿಸಲಿಲ್ಲ. ಇದರಿಂದ ಈಗ ಮತ್ತೆ ಮುಷ್ಕರಕ್ಕೆ ಮುಂದಾಗಿರುವ ಸಿಬ್ಬಂದಿ ಸಮಸ್ಯೆ ಬಗೆಹರಿಯುವವರೆಗೆ ಮುಷ್ಕರಕ್ಕೆ ಮುಂದಾಗಿದ್ದಾರೆ.