ಬೆಂಗಳೂರು :
“ಸಾರ್ವಜನಿಕರ ಅಹವಾಲುಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಯಲಹಂಕದಲ್ಲಿ ನಡೆದ “ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳ ಜತೆ ಮಾತನಾಡಿ ಹೇಳಿದ್ದಿಷ್ಟು;

“ಕಾರ್ಯಕ್ರಮದ ಎರಡನೇ ದಿನ 2600 ಅರ್ಜಿಗಳು ನೋಂದಣಿ ಆಗಿದ್ದು, ಅರ್ಜಿಗಳನ್ನು ವಿಂಗಡಿಸಿ ಅವುಗಳ ತ್ವರಿತ ವಿಲೇವಾರಿಗೆ ವಾರ್ಡ್ ಮಟ್ಟದ ಅಧಿಕಾರಿಗಳಿಗೆ ಸಮಯ ನಿಗದಿ ಮಾಡುತ್ತೇವೆ.

ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬರ ದೂರವಾಣಿ ಸಂಖ್ಯೆ ಪಡೆದಿದ್ದೇವೆ. ಎಲ್ಲಾ ದೂರುಗಳನ್ನು ಬಗೆಹರಿಸಲು ಪ್ರತ್ಯೇಕ ತಂಡ ಮಾಡುತ್ತೇವೆ.

ಜನರ ಅರ್ಜಿ ಸರಿ ಇಲ್ಲದಿದ್ದರೆ, ಅವರನ್ನು ಸಂಪರ್ಕಿಸಿ ಮತ್ತೆ ಸರಿಯಾದ ಅರ್ಜಿ ಪಡೆಯುತ್ತೇವೆ. ನಿವೇಶನ, ರಸ್ತೆ ಮುಚ್ಚಿರುವ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ ಪರಿಹಾರ ನೀಡಲು ಮಾರ್ಗದರ್ಶನ ನೀಡಿದ್ದೇನೆ. ಈ ಕಾರ್ಯಕ್ರಮಗಳು ಮುಗಿದ ನಂತರ ಅಧಿಕಾರಿಗಳ ಜೊತೆ ಮತ್ತೊಂದು ಸುತ್ತಿನ ಸಭೆ ಮಾಡಿ ಜನರ ಸಮಸ್ಯೆಗೆ ಹೇಗೆ ಪರಿಹಾರ ನೀಡಬೇಕು ಎಂದು ಚರ್ಚಿಸುತ್ತೇವೆ.

ಜನರಿಗೆ ತೊಂದರೆ ನೀಡಬಾರದು ಎಂಬುದು ಅಧಿಕಾರಿಗಳಿಗೂ ತಿಳಿಯಬೇಕು. ಹೀಗಾಗಿ ಅವರಿಗೆ ಸಂದೇಶ ನೀಡುತ್ತೇವೆ. ಕಷ್ಟ ಇದ್ದವರು ಮಾತ್ರ ಶಾಸಕರು ಹಾಗು ಮಂತ್ರಿಗಳ ಮನೆ ಕಚೇರಿಗೆ ಹೋಗುತ್ತಾರೆ. ಜನ ಈ ರೀತಿ ಅಲೆದಾಡುವಂತೆ ಆಗಬಾರದು. ಜನರಿಗೆ ನ್ಯಾಯ ಸಿಗುವಂತೆ ಮಾಡುತ್ತೇವೆ. ಹಕ್ಕುಪತ್ರ ವಿತರಣೆ ಸಮಯದಲ್ಲಿ ಎಲ್ಲ ದಾಖಲೆ ಪರಿಶೀಲಿಸುತ್ತೇವೆ.

ಯಾವ ಇಲಾಖೆಯ ದೂರುಗಳು ಹೆಚ್ಚಾಗಿವೆ ಎಂದು ಕೇಳಿದಾಗ, “ಕಂದಾಯ ಇಲಾಖೆ, ಪಾಲಿಕೆಗೆ ಸಂಬಂಧಿಸಿದ ದೂರುಗಳು ಹೆಚ್ಚಾಗಿದ್ದು, ಖಾತೆ ವಿಚಾರವಾಗಿಯೂ ದೂರುಗಳು ಬಂದಿವೆ. ಮನೆಗಳು ಬೇಕು ಎಂಬ ಬೇಡಿಕೆ ಕೂಡ ಹೆಚ್ಚಾಗಿದ್ದು, ಉಚಿತವಾಗಿ ಮನೆ ನೀಡಲು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಅವಕಾಶ ಇಲ್ಲ. ಇವರಿಗೆ ಕಡಿಮೆ ದರದಲ್ಲಿ ಮನೆ ನೀಡಲಾಗುತ್ತಿದ್ದು, ವಸತಿ ಇಲಾಖೆ ಜತೆ ಚರ್ಚೆ ಮಾಡಿ ಎಷ್ಟು ವಿನಾಯಿತಿ ನೀಡಬಹುದೋ ಅಷ್ಟು ನೀಡುತ್ತೇವೆ.

ಇನ್ನು ಪಾಲಿಕೆ ತೆರಿಗೆ ವಿಚಾರದಲ್ಲಿ ತೆರಿಗೆ ಕಟ್ಟದವರಿಗೆ ದಂಡದ ಪ್ರಮಾಣ ಹೆಚ್ಚಾಗಿದೆ ಎಂಬ ಅರ್ಜಿಗಳಿವೆ. ಸಣ್ಣ ಮನೆಗಳಿಗೆ ನೆರವು ನೀಡಲು ಅಧಿಕಾರಿಗಳ ಜತೆ ಚರ್ಚೆ ಮಾಡಿ ಕಾನೂನಿನಲ್ಲಿ ಎಷ್ಟು ಅವಕಾಶ ಇದೆ ಎಂದು ನೋಡುತ್ತೇವೆ” ಎಂದು ತಿಳಿಸಿದರು.

ಏಜೆಂಟ್ ಗಳಿಗೆ ಹಣ ನೀಡಬೇಡಿ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಈಗಲೂ ಜನರಿಗೆ ಏಜೆಂಟರ ಹಿಂದೆ ಹೋಗಬೇಡಿ ಎಂದು ಹೇಳುತ್ತೇನೆ. ಈ ಭಾಗದ ಜನ ಕಂದಾಯ ನಿವೇಶನ, ಜಮೀನು ಕಳೆದುಕೊಂಡಿದ್ದು, ಇಂತಹವರನ್ನು ದಾರಿ ತಪ್ಪಿಸುವ ಕೆಲಸ ಆಗುತ್ತಿದೆ. ಈ ಜನರಿಗೆ ಕಾನೂನು ವ್ಯಾಪ್ತಿಯಲ್ಲಿ ಎಷ್ಟು ಸಹಾಯ ಮಾಡಲು ಸಾಧ್ಯವೋ ಅಷ್ಟು ಮಾಡುತ್ತೇವೆ. ಏಜೆಂಟರನ್ನು ದೂರ ಇಡಬೇಕು, ಅವರ ಬಗ್ಗೆ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದಲೇ ನಾನು ಇಲ್ಲಿಗೆ ಬಂದಿದ್ದೇನೆ” ಎಂದು ತಿಳಿಸಿದರು.

ಕರ ಸೇವಕರ ಬಂಧನದ ಬಗ್ಗೆ ಜೆಡಿಎಸ್ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಈಗಷ್ಟೇ ಬಿಜೆಪಿ ಜೊತೆ ಎನ್ ಡಿಎ ಮೈತ್ರಿಕೂಟಕ್ಕೆ ಹೋಗಿದ್ದಾರೆ. ಅವರು ಕರಸೇವಕರ ಬಗ್ಗೆ ಮಾತಾನಾಡುತ್ತಿದ್ದು ಅವರಿಗೆ ಒಳ್ಳೆಯದಾಗಲಿ. ಇವರು ಕೂಡ ಸೇವೆ ಮಾಡಲಿ” ಎಂದು ತಿಳಿಸಿದರು.

ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಸರ್ಕಾರವನ್ನು ಸೋಲಿಸುತ್ತೇವೆ ಎಂಬ ದೇವೇಗೌಡರ ಹೇಳಿಕೆ ಬಗ್ಗೆ ಕೇಳಿದಾಗ, “ಬಹಳ ಸಂತೋಷ. ಅವರಿಗೆ ಒಳ್ಳೆಯದಾಗಲಿ. ಅವರು ಆರೋಗ್ಯವಂತರಾಗಿರಲಿ” ಎಂದು ತಿಳಿಸಿದರು.