ಕನ್ನಡ ಚಲನಚಿತ್ರರಂಗದ ಬೆಳ್ಳಿತೆರೆಗೆ ಎಂದೂ ಮರೆಯಲಾಗದ ” ಗೆಜ್ಜೆಪೂಜೆ ಮತ್ತು ಫಣಿಯಮ್ಮ” ನಂತಹ ಶ್ರೇಷ್ಠ ಕಾದಂಬರಿಗಳನ್ನು ನೀಡಿದ ಮಾಲೂರು ಕೃಷ್ಣರಾವ್ ( ಅವರ ಪತ್ನಿ ) ಇಂದಿರಾ ತಮ್ಮ ನಲ್ವತ್ತೈದನೆಯ ವಯಸ್ಸಿನಲ್ಲಿ ಕಾದಂಬರಿ ಬರೆಯಲು ಆರಂಭಿಸಿದವರು. ಕಣಗಾಲ ಪುಟ್ಟಣ್ಣನವರ ನಿರ್ದೇಶನದಲ್ಲಿ ಗೆಜ್ಜೆಪೂಜೆ ಮತ್ತು ಪ್ರೇಮಾ ಕಾರಂತರ ನಿರ್ದೇಶನದಲ್ಲಿ ಫಣಿಯಮ್ಮ ಚಿತ್ರರಸಿಕರ ಮನ ಸೂರೆಗೊಂಡವು. ಫಣಿಯಮ್ಮ ಕಟ್ಟುಕಥೆಯಲ್ಲ. ಆ ಬಾಲವಿಧವೆ ತನ್ನ ನೋವನ್ನು ಎಂ. ಕೆ. ಇಂದಿರಾ ಅವರ ತಾಯಿಯ ಹತ್ತಿರ ಹೇಳಿಕೊಂಡಿದ್ದನ್ನು ಕೇಳಿ ಅದನ್ನೇ ಕಾದಂಬರಿಯಾಗಿ ರಚಿಸಿದ್ದು.
ಟಿ. ಸೂರ್ಯನಾರಾಯಣರಾವ್- ಬನಶಂಕರಮ್ಮನವರ ಪುತ್ರಿಯಾಗಿ ೫-೧-೧೯೧೭ ರಂದು ಮಲೆನಾಡಿನ ಸೆರಗು ತೀರ್ಥಹಳ್ಳಿಯಲ್ಲಿ ಜನಿಸಿದ ಇಂದಿರಾ ಅವರು ಮಾಲೂರು ಕೃಷ್ಣರಾವ್ ಅವರ ಕೈಹಿಡಿದದ್ದು ಅವರ ೧೨ ನೇ ವಯಸ್ಸಿನಲ್ಲೇ. ಅವರು ಪಾಸು ಮಾಡಿದ್ದು ಏಳನೇ ಇಯತ್ತೆ. ಆದರೆ ಸ್ವಂತ ಪ್ರಯತ್ನದಿಂದ ಕನ್ನಡ ಮತ್ತು ಹಿಂದಿ ಸಾಹಿತ್ಯವನ್ನು ಅರಗಿಸಿಕೊಂಡ ಅವರು ೪೫ ನೇ ವಯಸ್ಸಿಗೆ ಕಾದಂಬರಿ ಬರೆಯಲು ಆರಂಭಿಸಿ ಸುಮಾರು ನಾಲ್ವತ್ತು ಕಾದಂಬರಿಗಳನ್ನು ಬರೆದರು. ( ಕೃಷ್ಣಮೂರ್ತಿ ಪುರಾಣಿಕರು ಸಹ ಕಾದಂಬರಿ ಬರೆಯಲು ಆರಂಭಿಸಿದ್ದು‌ ತಮ್ಮ ೪೦ ನೇ ವಯಸ್ಸಿನಲ್ಲಿ ಮತ್ತು ಅವರು ೮೦ ಕಾದಂಬರಿಗಳನ್ನು ಬರೆದಿದ್ದಾರೆಂಬುದನ್ನಿಲ್ಲಿ ನೆನಪಿಸಿಕೊಳ್ಳಬಹುದು. )
ಇಂದಿರಾ ಅವರು‌ ಸಹ ಕನ್ನಡ ನಾಡಿನ ಓದುಗರ ಅತ್ಯಂತ ಮೆಚ್ಚಿನ ಕಾದಂಬರೀಕಾರರು.
ಇಂದಿರಾ ಅವರು ಪ್ರಜಾವಾಣಿಯ ಛೂಬಾಣ ಖ್ಯಾತಿಯ ಟೀಎಸ್ಸಾರ್ ಅವರ ಸಹೋದರಿ. ಒಟ್ಟು ಏಳು ಕಾದಂಬರಿಗಳು ಸಿನಿಮಾ ಆದವು. ಎರಡು ಹಿಂದಿಯಲ್ಲಿ ಒಂದೊಂದು ತಮಿಳು ತೆಲುಗು ಭಾಷೆಗಳಲ್ಲಿ ತೆರೆ ಕಂಡವು. ಸದಾನಂದ, ತುಂಗಭದ್ರಾ, ನವರತ್ನ, ಫಣಿಯಮ್ಮ, ಗೆಜ್ಜೆಪೂಜೆ, ಪೂರ್ವಾಪರ, ಗಿರಿಬಾಲೆ, ಮನ ತುಂಬಿದ ಮಡದಿ, ತಾಪದಿಂದ ತಂಪಿಗೆ, ಬ್ರಹ್ಮಚಾರಿ, ಹಸಿವು ಮೊದಲಾದ ಕಾದಂಬರಿಗಳನ್ನು ಅವರು ಬರೆದರು. ನಾಲ್ಕು ಕಾದಂಬರಿಗಳು ಅಕಾಡೆಮಿ ಬಹುಮಾನ ಪಡೆದವು. ಫಣಿಯಮ್ಮ ಸಿನಿಮಾ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಪಾತ್ರವಾಯಿತು. ಗೆಜ್ಜೆಪೂಜೆ ಕನ್ನಡದ ಅತ್ಯಂತ ಯಶಸ್ವೀ ಚಿತ್ರವೆನಿಸಿ ಅಪಾರ ಜನಪ್ರಿಯತೆ ಪಡೆಯಿತು.
ನಾನು ೧೯೭೦ ರ ದಶಕದಲ್ಲಿ ಇಂದಿರಾ ಅವರನ್ನು ವಿಲ್ಸನ್ ಗಾರ್ಡನ್ ನಲ್ಲಿದ್ದ ಅವರ ಮನೆಯಲ್ಲಿ ಭೆಟ್ಟಿಯಾಗಿದ್ದೆ. ಬಹಳ ಸರಳ, ಲಕ್ಷಣವಂತ ಮತ್ತು ಗೌರವಾದರ ಹುಟ್ಟಿಸುವ ವ್ಯಕ್ತಿತ್ವ ಅವರದು. ಸುಮಾರು ಅರ್ಧ , ತಾಸು ತುಂಬಾ ಆತ್ಮೀಯವಾಗಿ ಮಾತನಾಡಿ ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಎಪ್ಪತ್ತೇಳು ವರ್ಷ ಬದುಕಿದ ಅವರು ೧೫-೩-೯೪ ರಂದು ನಿಧನಹೊಂದಿದರು. ಕನ್ನಡ ಸಾಹಿತ್ಯಕ್ಕೇ ಘನತೆ ಗೌರವ ತಂದುಕೊಟ್ಟವರು ಶ್ರೀಮತಿ ಎಂ. ಕೆ. ಇಂದಿರಾ ಅವರು. ಎಂದೂ ಮರೆಯಲಾಗದ ಮಹಾನ್ ಮಹಿಳೆ !
– ಎಲ್. ಎಸ್. ಶಾಸ್ತ್ರಿ