ಬೆಳಗಾವಿ : ಸರ್ಕಾರದ ನಿರ್ದೇಶನದಂತೆ ಭಾರತದ ಪ್ರಜಾಪ್ರಭುತ್ವ, ಸಂವಿಧಾನದ ಮಹತ್ವವನ್ನು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸೆ.15. ರಂದು ಮಾನವ ಸರಪಳಿ ನಿರ್ಮಿಸುವ ಮೂಲಕ ಆಯೋಜಿಸಲಾಗುವ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದ ಯಶಸ್ವಿಗಾಗಿ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ (ಸೆ.2) ನಡೆದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತ ಅರಿವಿನ ಜಾಗೃತಿ ಅತ್ಯಂತ ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರವು ಬೃಹತ್ ಮಾನವ ಸರಪಳಿಯನ್ನು ರಚಿಸುವ ಮೂಲಕ ವಿಭಿನ್ನವಾಗಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲು ನಿರ್ದೇಶಿಸಿದೆ ಎಂದು ಹೇಳಿದರು.
ಸೆ.15ರಂದು ಜರುಗಲಿರುವ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪ್ರತಿ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಲು ಕ್ರಮ ವಹಿಸಬೇಕು.
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಿಂಬಿಸುವುದಕ್ಕೆ ಪೂರಕವಾಗಿ ಮಾನವ ಸರಪಳಿಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬಹುದು ಎಂದು ತಿಳಿಸಿದರು.
ಸಮಿತಿ ರಚನೆಗೆ ನಿರ್ದೇಶನ:
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ನಿರ್ಮಿಸಲಾಗುವ ಮಾನವ ಸರಪಳಿಗೆ ಸಾರ್ವಜನಿಕರು, ವಿದ್ಯಾರ್ಥಿ, ಸಂಘ-ಸಂಸ್ಥೆಗಳು, ಸಂಘಟನೆಗಳು ಪಾಲ್ಗೊಳ್ಳಲು ತಹಶೀಲ್ದಾರರ ನೇತೃತ್ವದಲ್ಲಿ ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಶೀಘ್ರವೇ ಸಭೆ ಜರುಗಿಸಬೇಕು ಎಂದರು.
ಕಾರ್ಯಕ್ರಮದ ದಿನದಂದು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ಇಲಾಖೆಯಿಂದ ಬಸ್ ವ್ಯವಸ್ಥೆ ಮಾಡಲು ಸೂಚಿಸಿದ ಅವರು ಪ್ರತಿ 200 ಮೀ. ಪ್ರದೇಶಕ್ಕೆ ಸೆಕ್ಟರ್ ಲೀಡರಗಳನ್ನು ನೆಮಿಸಬೇಕು ಎಂದು ಹೇಳಿದರು.
ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕು:
ಮಾನವ ಸರಪಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆಯಾ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವಂತಹ ಗ್ರಾಮಗಳ ಮಾರ್ಗಗಳನ್ನು ನಿಗದಿಪಡಿಸಬೇಕು. ಈ ಕಾರ್ಯಕ್ರಮದಲ್ಲಿ ಜನರು ಸ್ವಯಂ ಪ್ರೇರಿತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಹೇಳಿದರು.
ಸುವರ್ಣ ವಿಧಾನ ಸೌಧದ ಆವರಣದಲ್ಲಿ ಮಾನವ ಸರಪಳಿ ನಿರ್ಮಾಣದ ಜೊತೆಗೆ ವೇದಿಕೆ ಕಾರ್ಯಕ್ರಮಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲು ತಿಳಿಸಿದರು.
ಜಿಲ್ಲಾ ಪಂಚಾಯತ ಸಿ.ಇ.ಓ ರಾಹುಲ ಶಿಂಧೆ ಅವರು ಮಾತನಾಡಿ ಕಾರ್ಯಕ್ರಮದ ಯಶಸ್ವಿಗಾಗಿ ಪ್ರತಿ ಗ್ರಾಮಗಳಿಂದ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಪಾಲ್ಗೊಳ್ಳುವಂತೆ ಕ್ರಮವಹಿಸಬೇಕು. ಸ್ಥಳೀಯವಾಗಿ ತಂಡಗಳನ್ನು ರಚಿಸುವದರ ಜೊತೆಗೆ ಸ್ಥಳೀಯ ಸ್ವಸಹಾಯ ಸಂಘ, ಸಂಸ್ಥೆಗಳು, ಸಂಘಟನೆಗಳು ಪಾಲ್ಗೊಳ್ಳಬೇಕು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿಧ್ಯಾರ್ಥಿಗಳಿಗೆ ಹಾಲು ವಿತರಿಸಬೇಕು ಎಂದರು.
ಈ ಕಾರ್ಯಕ್ರಮದ ಅಂಗಾವಗಿ ತಾಲೂಕು ಮಟ್ಟದ ಅಧಿಕಾರಿಗಳು ಖುದ್ದಾಗಿ ತಮ್ಮ ವ್ಯಾಪ್ತಿಯ ಸ್ಥಳ ಪರಿಶೀಲಿಸಿ ಸಭೆ ಜರುಗಿಸಿ ಯೋಜನೆ ರೂಪಿಸಬೇಕು. ಈ ಕುರಿತು ಆಯಾ ಗ್ರಾಮ ಪಂಚಾಯತ ಸದಸ್ಯರು, ಗ್ರಾಮದ ಮುಖಂಡರುಗಳೊಂದಿಗೆ ಸಮನ್ವಯ ಸಾಧಿಸಲು ಜಿ.ಪಂ ಸಿಇಒ ರಾಹುಲ್ ಶಿಂಧೆ ತಿಳಿಸಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ರಸ್ತೆಗಳನ್ನು ಸುಧಾರಣೆಗೆ ತರುವ ನಿಟ್ಟಿನಲ್ಲಿ ಎಲ್ಲಾ ಗ್ರಾಮ ಪಂಚಾಯತಿ ಪಿಡಿಓಗಳಿಗೆ ನಿರ್ದೇಶನ ನೀಡಲಾಗುವುದು. ಸಮಿತಿ ರಚನೆಯ ಬಳಿಕ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕುರಿತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಿದ್ಧತೆಗೆ ಸೂಚನೆ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಅವರು ತಿಳಿಸಿದರು.
ಸಭೆಯಲ್ಲಿ ಪ್ರಶಿಕ್ಷಣಾರ್ಥಿ ಆಯ್.ಎ.ಎಸ್. ಅಧಿಕಾರಿ ದಿನೇಶಕುಮಾರ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೆಶಕ ರಾಮನಗೌಡ ಕನ್ನೋಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ; ಮಾನವ ಸರಪಳಿ ಮಾರ್ಗ:
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಜಿಲ್ಲೆಯ ರಾಮದುರ್ಗದ ಸಾಲಹಳ್ಳಿಯಿಂದ ಪ್ರಾರಂಭವಾಗುವ ಮಾನವ ಸರಪಳಿ ಯರಗಟ್ಟಿ-ನೇಸರಗಿ-ಕರಡಿಗುದ್ದಿ- ಶಿಂಧೊಳ್ಳಿ ಕ್ರಾಸ- ಸುವರ್ಣ ವಿಧಾನ ಸೌಧ- ಮುತನಾಳ-ಎಂ.ಕೆ.ಹುಬ್ಬಳ್ಳಿ-ಕಿತ್ತೂರ-ಹಳೆ ತೇಗೂರ ವರೆಗೆ ಮಾನವ ಸರಪಳಿ ನಿರ್ಮಾಣ ಮಾಡಲಾಗುವದು.