ಬೆಳಗಾವಿ :ಬೆಳಗಾವಿ ಲೋಕಸಭಾ ಚುನಾವಣೆ-೨೦೨೪ಕ್ಕೆ ಸಂಬಂಧಿಸಿ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ವಿದ್ಯುನ್ಮಾನ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ಹಾಗೂ ಬಲ್ಕ್ ಎಸ್‌ಎಂಎಸ್‌ಗಳನ್ನು ಪ್ರಚುರಪಡಿಸುವ ಮುಂಚೆ ಜಿಲ್ಲಾಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ(ಎಂಸಿಎಂಸಿ)ಯ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುವ ಎಂಸಿಎಂಸಿ ಸಮಿತಿಯು ವಿದ್ಯುನ್ಮಾನ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಳ್ಳುವ ಚುನಾವಣಾ ವಿಷಯ ಹಾಗೂ ಅವುಗಳ ವಿಷಯವಸ್ತು(ಕಂಟೆಂಟ್) ಪರಿಶೀಲಿಸಿ ಅನುಮತಿ ನೀಡಲಿದೆ.

ಸ್ಥಳೀಯ ಕೇಬಲ್ ನೆಟವರ್ಕ, ಟಿವಿ ಚಾನೆಲ್‌ಗಳು, ಖಾಸಗಿ ಎಫ್‌ಎಂ ರೇಡಿಯೋ ಕೇಂದ್ರಗಳು, ಸಿನಿಮಾಮಂದಿರಗಳು, ಸಾಮಾಜಿಕ ಜಾಲತಾಣಗಳು ಹಾಗೂ ಮೊಬೈಲ್ ಸರ್ವೀಸ್ ಪ್ರೊವೈಡರ್‌ಗಳು ಯಾವುದೇ ರೀತಿಯ ಚುನಾವಣಾ ಜಾಹೀರಾತು ಅಥವಾ ಬಲ್ಕ್ ಎಸ್‌ಎಂಎಸ್ ಪ್ರಸಾರ ಮಾಡುವ ಮುಂಚೆ ಎಂಸಿಎಂಸಿ ನೀಡಿರುವ ಪೂರ್ವಾನುಮತಿ ಪ್ರಮಾಣಪತ್ರವನ್ನು ಜಾಹೀರಾತು ನೀಡುವ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗಳ ಕಡೆಯಿಂದ ಪಡೆದುಕೊಳ್ಳಬೇಕು.

ಭಾರತ ಚುನಾವಣಾ ಆಯೋಗದ ನಿರ್ದೇಶನಗಳು ಮತ್ತು ಚಾಲ್ತಿಯಲ್ಲಿರುವ ವಿವಿಧ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಎಲ್ಲ ಮಾಧ್ಯಮದವರು ಹಾಗೂ ರಾಜಕೀಯ ಪಕ್ಷದ ಪ್ರತಿನಿಧಿಗಳು ಸಹಕರಿಸಬೇಕು.

ಮಾಧ್ಯಮಗಳ ಮೇಲೆ ನಿಗಾ:
ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ತಕ್ಷಣದಿಂದಲೇ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗುವ ಚುನಾವಣಾ ಜಾಹೀರಾತು ಮತ್ತು ಸಂದೇಹಾಸ್ಪದ ಪೇಡ್‌ನ್ಯೂಸ್‌ಗಳ ಮೇಲೆ ನಿಗಾ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಸಮಿತಿಯು ಮುದ್ರಣ, ವಿದ್ಯುನ್ಮಾನ ಮಾಧ್ಯಮಗಳಾದ ಕೇಬಲ್ ಚಾನೆಲ್/ಟಿವಿ ಚಾನೆಲ್‌ಗಳು, ರೇಡಿಯೋ ಹಾಗೂ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲಿದ್ದು, ಅನುಮತಿ ಪಡೆಯದೇ ಚುನಾವಣಾ ಜಾಹೀರಾತು ನೀಡಿರುವುದು ಕಂಡುಬಂದಲ್ಲಿ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಿದೆ.
ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪರವಾಗಿ ಜಾಹೀರಾತುಗಳನ್ನು ಪ್ರಕಟಿಸಿದ ಸಂದರ್ಭದಲ್ಲಿ ಆಯಾ ಮಾಧ್ಯಮಗಳಿಗೆ ನಿಗದಿಪಡಿಸಲಾದ ಜಾಹೀರಾತು ದರ ಅಥವಾ ಆಯಾ ಮಾಧ್ಯಮಗಳ ವಾಸ್ತವಿಕ ವಾಣಿಜ್ಯ ಜಾಹೀರಾತು ದರ ಪರಿಗಣಿಸಿ ಅದರ ಮೊತ್ತವನ್ನು ಪಕ್ಷ ಅಥವಾ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಲು ಚುನಾವಣಾ ವೆಚ್ಚ ವೀಕ್ಷಕರಿಗೆ ಸಮಿತಿಯು ಮಾಹಿತಿ ನೀಡಲಿದೆ.

ಅದೇ ರೀತಿಯಲ್ಲಿ ಯಾವುದೇ ಮಾಧ್ಯಮದಲ್ಲಿ ಪ್ರಸಾರವಾದ ಚುನಾವಣಾ ಜಾಹೀರಾತುಗಳಿಗೆ ಪೂರ್ವಾನುಮತಿ ಪಡೆಯಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಗವುದು. ಅಭ್ಯರ್ಥಿಯ ಅಥವಾ ಪಕ್ಷದ ಒಪ್ಪಿಗೆಯಿಂದ ನೀಡಲಾಗಿರುವ ಜಾಹೀರಾತುಗಳ ವೆಚ್ಚವನ್ನು ಸಂಬಂಧಪಟ್ಟ ಪಕ್ಷ ಅಥವಾ ಅಭ್ಯರ್ಥಿಯ ವೆಚ್ಚಕ್ಕೆ ಸೇರಿಸಲಾಗುತ್ತದೆ.

ಮೀಡಿಯಾ ಮಾನಿಟರಿಂಗ್ ಸೆಲ್:
ಚುನಾವಣಾ ಜಾಹೀರಾತುಗಳ ಪರಿಶೀಲನೆ ಮತ್ತು ಪೂರ್ವಾನುಮತಿ(ಪ್ರಿಸರ್ಟಿಫಿಕೇಷನ್)ಗಾಗಿ “ವಾರ್ತಾಭವನ” ಉಪ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನ್ಯಾಯಾಲಯ ಆವರಣ” (ದೂರವಾಣಿ ಸಂಖ್ಯೆ-೯೪೮೦೮೪೧೨೩೩) ಈ ಕಚೇರಿಯಲ್ಲಿ ಮೀಡಿಯಾ ಮಾನಿಟರಿಂಗ್ ಕೇಂದ್ರ ಸ್ಥಾಪಿಸಲಾಗಿರುತ್ತದೆ. ಜಾಹೀರಾತುಗಳನ್ನು ಪ್ರಕಟ ಅಥವಾ ಪ್ರಸಾರ ಮಾಡಲು ಪೂರ್ವಾನುಮತಿ ಪಡೆಯಲು ಈ ಕೇಂದ್ರದಲ್ಲಿ ಅರ್ಜಿ ನಮೂನೆಗಳು ಲಭ್ಯವಾಗಿರುತ್ತವೆ. ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷಗಳು ಭರ್ತಿ ಮಾಡಿದ ಅರ್ಜಿ ಜತೆಗೆ ಜಾಹೀರಾತಿನ ಎರಡು ಸಿಡಿ ಹಾಗೂ ಹಸ್ತಪ್ರತಿ ಸಲ್ಲಿಸಬೇಕು.
ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು(ಎಂಸಿಎಂಸಿ) ಸಮಿತಿಯು ಅರ್ಜಿಗಳನ್ನು ಪರಿಶೀಲಿಸಿ, ಪೂರ್ವಾನುಮತಿ ನೀಡಲಿದೆ. ಆದ್ದರಿಂದ ಚುನಾವಣೆಗೆ ಸಂಬಂಧಿಸಿ ಯಾವುದೇ ಜಾಹೀರಾತುಗಳನ್ನು ಪ್ರಕಟ ಅಥವಾ ಪ್ರಸಾರ ಮಾಡಲು ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.