ಬೆಳಗಾವಿ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ದಿನದಂದು ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಮತಗಟ್ಟೆ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಯಾವುದೇ ಗೊಂದಲಕ್ಕೆ ಆಸ್ಪದ ನೀಡದೇ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ವನಿತಾ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ನಡೆದ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮತಗಟ್ಟೆ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಎರಡು ಹಂತದಲ್ಲಿ ತರಬೇತಿ ನೀಡಲಾಗುವುದು. ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಹೊಸಬರು ಏನೇ ಗೊಂದಲಗಳಿದ್ದರೆ ತರಬೇತಿ ಅವಧಿಯಲ್ಲಿಯೇ ತರಬೇತುದಾರರಿಂದ ಮಾಹಿತಿಯನ್ನು ಪಡೆದುಕೊಳ್ಳಬೇಕು. ತರಬೇತಿಗೆ ಸಂಬಂಧಿಸಿ ಸಂಪೂರ್ಣ ಸಚಿತ್ರ ಮಾಹಿತಿಯನ್ನು ಹೊಂದಿರುವ ಸಾಫ್ಟ್ ಕಾಪಿ ಹಾಗೂ ಪುಸ್ತಕ ನೀಡಲಾಗುವುದು.

ಅಣಕು ಮತದಾನ-ಎಚ್ಚರಿಕೆ ವಹಿಸಲು ಸೂಚನೆ:
ಅಣಕು ಮತದಾನ ಆದ ಬಳಿಕ ಸ್ಲಿಪ್ ಗಳನ್ನು ತೆಗೆಯುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ಅಣಕು ಮತದಾನದ ಸ್ಲಿಪ್ ತೆಗೆಯದಿದ್ದರೆ ಮತ ಎಣಿಕೆ ವೇಳೆ ಗೊಂದಲ ಉಂಟಾಗುತ್ತದೆ.
ಆದ್ದರಿಂದ ಅಣಕು ಮತದಾನ ಬಳಿಕ ಕಡ್ಡಾಯವಾಗಿ ನಿಯಮಾನುಸಾರ ಇವಿಎಂ ಕ್ಲಿಯರ್ ಮಾಡುವುದರ ಜತೆಗೆ ಮತಗಟ್ಟೆ ಅಧಿಕಾರಿಗಳು ಹಾಗೂ ಏಜೆಂಟ್ ರಿಂದ ಸಹಿ ಪಡೆದುಕೊಳ್ಳಬೇಕು.

ಮತದಾನ ದಿನದಂದು ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ಪ್ರತಿಯೊಬ್ಬ ಅಧಿಕಾರಿ/ಸಿಬ್ಬಂದಿ ಕಡ್ಡಾಯವಾಗಿ ಮತದಾನ ಮಾಡಬೇಕು. ಇದಕ್ಕಾಗಿ ನಿಗದಿತ ಅಂಚೆ ಮತದಾನ ನಮೂನೆಗಳನ್ನು ತರಬೇತಿ ಸಂದರ್ಭದಲ್ಲಿಯೇ ಭರ್ತಿ ಮಾಡಿ ಕೊಡಬೇಕು ಎಂದು ತಿಳಿಸಿದರು.

ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿ/ಸಿಬ್ಬಂದಿ ಯಿಂದ ಅಂಚೆ ಮತದಾನಕ್ಕೆ ನಿಗದಿತ ನಮೂನೆ(ಫಾರ್ಮ್ ೧೨ ಹಾಗೂ ೧೨ ಎ) ಗಳನ್ನು ಸಂಗ್ರಹ ಪ್ರಕ್ರಿಯೆಯನ್ನು ಹಾಗೂ ಇಡಿಸಿ(ಎಲೆಕ್ಷನ್ ಡ್ಯೂಟಿ ಸರ್ಟಿಫಿಕೇಟ್) ನೀಡುವ ಪ್ರಕ್ರಿಯೆಯನ್ನು ಪರಿಶೀಲಿಸಿದರು.
ಎಲ್ಲರಿಗೂ ಮತದಾನ ಮಾಡಲು ಅನುಕೂಲವಾಗುವಂತೆ ಸೌಲಭ್ಯವನ್ನು ಚುನಾವಣಾ ಆಯೋಗ ಕಲ್ಪಿಸಿದೆ ಆದ್ದರಿಂದ ತಪ್ಪದೇ ಮತದಾನ ಮಾಡುವಂತೆ ತಿಖಿಸಿದರು.

ಇದೇ ವೇಳೆ ಎಲೆಕ್ಟ್ರಾನಿಕ್ ಮತಯಂತ್ರ ಜೋಡಣೆ, ಬಳಕೆಯ ವಿಧಾನಗಳ ಕುರಿತು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸ್ವತಃ ಪ್ರಾತ್ಯಕ್ಷಿಕೆ ತೋರಿಸಿದರು. ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್ ಮತ್ತು ವಿವಿಪ್ಯಾಟ್ ಗಳ ಜೋಡಣೆ ಮಾಡುವಾಗ ಜಾಗರೂಕತೆ ವಹಿಸಬೇಕು. ಏನಾದರೂ ಗೊಂದಲಗಳಿದ್ದರೆ ತರಬೇತಿ ಸಂದರ್ಭದಲ್ಲಿಯೇ ಬಗೆಹರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಶಕೀಲ್ ಅಹ್ಮದ್ ಹಾಗೂ ತಹಶೀಲ್ದಾರ ಸಿದ್ದರಾಯ ಭೋಸಗಿ ಮತ್ತಿತರರು ಉಪಸ್ಥಿತರಿದ್ದರು. ನಂತರ ಬಿ.ಕೆ. ಮಾಡೆಲ್ ಶಾಲೆಯಲ್ಲಿ ನಡೆದಿರುವ ಬೆಳಗಾವಿ ಉತ್ತರ ಮತ್ತು ಗ್ರಾಮೀಣ ಮತಕ್ಷೇತ್ರಗಳ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳ ತರಬೇತಿ ಕಾರ್ಯಕ್ರಮವನ್ನು ಕೂಡ ಪರಿಶೀಲಿಸಿದರು.
ಸಹಾಯಕ ಚುನಾವಣಾಧಿಕಾರಿ ಪಿ.ಎನ್.ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.

ಪರಿಶೀಲನೆ:
ಇದಾದ ಬಳಿಕ ಬೆಳಗಾವಿ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಮತಕ್ಷೇತ್ರದ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ಕೇಂದ್ರವಾಗಿರುವ ಬಿ.ಕೆ.ಮಾಡೆಲ್ ಶಾಲೆಯಲ್ಲಿರುವ ಸ್ಟ್ರಾಂಗ್ ರೂಮ್ ಗಳನ್ನು ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಅವರು ಪರಿಶೀಲಿಸಿದರು.

ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ನಿರಂತರವಾಗಿ ಬಿಗಿಭದ್ರತೆ ಒದಗಿಸಬೇಕು ಎಂದು ಫೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಹಾಯಕ ಚುನಾವಣಾಧಿಕಾರಿ ಪಿ.ಎನ್.ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.