ಬೆಂಗಳೂರು:
“ಚುನಾವಣೆ ಕಾರಣ ತೆಲಂಗಾಣಕ್ಕೆ ಹೋಗುತ್ತಿದ್ದು, ಪಕ್ಷ ಏನು ಕೆಲಸ ನೀಡುತ್ತದೆಯೋ ಅದನ್ನು ಮಾಡುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಉತ್ತರಿಸಿದರು. ತೆಲಂಗಾಣ ಚುನಾವಣೆ ಫಲಿತಾಂಶ ಬರುವ ಹಿನ್ನೆಲೆಯಲ್ಲಿ ತಾವು ತೆರಳುತ್ತೀರಾ ಎಂದು ಕೇಳಿದಾಗ ಈ ರೀತಿ ಉತ್ತರಿಸಿದರು.

“ನನ್ನ ಕ್ಷೇತ್ರದಲ್ಲಿ ಇಂದು ಜನ ಸಂಪರ್ಕ ಸಭೆ ಇಟ್ಟುಕೊಂಡಿದ್ದೇನೆ. ನನ್ನ ಜನರ ಅಹವಾಲು ಸ್ವೀಕರಿಸಲು ಹೋಗುತ್ತಿದ್ದೇನೆ. ನಂತರ 10 ದಿನಗಳ ಕಾಲ ಬೆಳಗಾವಿ ಅಧಿವೇಶನಕ್ಕೆ ಹೋಗಬೇಕಿದೆ. ಈ ಮಧ್ಯೆ ತೆಲಂಗಾಣಕ್ಕೆ ಹೋಗುತ್ತೇನೆ ಎಂದು ತಿಳಿಸಿದರು.

ನೆರೆ ರಾಜ್ಯದ ನಾಯಕರು ನಮ್ಮ ರಾಜ್ಯದ ಚುನಾವಣೆಯಲ್ಲಿ ಕೆಲಸ ಮಾಡಿದ್ದರು. ನಮ್ಮ ನಾಯಕರು ಅಲ್ಲಿನ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಹೀಗಾಗಿ ನೆರೆ ರಾಜ್ಯದ ಚುನಾವಣೆಯಲ್ಲಿ ನಮಗೆ ನಮ್ಮದೇ ಆದ ಜವಾಬ್ದಾರಿ ಇರುತ್ತದೆ” ಎಂದರು.

ನಿಮ್ಮ ಪಕ್ಷದ ಶಾಸಕರನ್ನು ಅನ್ಯ ಪಕ್ಷದವರು ಸಂಪರ್ಕ ಮಾಡುತ್ತಿದ್ದಾರಾ? ನಿಮ್ಮ ಶಾಸಕರು ಬೇರೆ ಪಕ್ಷಕ್ಕೆ ಹೋಗುವ ಭೀತಿ ಇದೆಯೇ ಎಂದು ಕೇಳಿದಾಗ, “ನಮ್ಮ ಯಾವುದೇ ಶಾಸಕರು ಬೇರೆ ಪಕ್ಷದ ಕಡೆ ಹೋಗುವುದಿಲ್ಲ. ಈ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ನಮ್ಮ ಅಭ್ಯರ್ಥಿಗಳು ತಮ್ಮನ್ನು ಸಂಪರ್ಕ ಮಾಡಿದವರ ಬಗ್ಗೆ ನಮಗೆ ಮಾಹಿತಿ ನೀಡಿದ್ದಾರೆ. ನಾವು ಕೂಡ ಜಾಗೃತರಾಗಿದ್ದೇವೆ” ಎಂದರು.

ಜನ ಸಂಪರ್ಕ ಸಭೆ :
ಡಿಸಿಎಂ ಡಿ ಕೆ ಶಿವಕುಮಾರ್ ಅವರು ಕನಕಪುರದಲ್ಲಿ ಶನಿವಾರ ಜನಸಂಪರ್ಕ ಸಭೆ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಅವಿನಾಶ್ ಮೆನನ್, ಸ್ಥಳೀಯ ಮುಖಂಡರಾದ ಡಿ ಎಂ ವಿಶ್ವನಾಥ್, ವಿಜಯ್ ದೇವ್, ನಾರಾಯಣಗೌಡ, ಜಯರಾಮ್, ಎಚ್ ಕೆ ಶ್ರೀಕಂಠು, ಕೃಷ್ಣಮೂರ್ತಿ ಮತ್ತಿತರರು ಇದ್ದರು.