ಗುವಾಹತಿ : ಅಸ್ಸಾಂನ ದಿಬ್ರುಗಢದಲ್ಲಿ ಪೊಲೀಸರು ಶುಕ್ರವಾರ 11 ಅಪರೂಪದ ಟೋಕೆ ಗೆಕ್ಕೊ ಹಲ್ಲಿಗಳನ್ನು ವಶಪಡಿಸಿಕೊಂಡಿದ್ದು, ಮೂವರು ಕಳ್ಳಸಾಗಣೆದಾರರನ್ನು ಬಂಧಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಟೋಕೆ ಗೆಕ್ಕೊಗಳನ್ನು ಹೆಚ್ಚು ಅಳಿವಿನಂಚಿನಲ್ಲಿವ ಜೀವಿಗಳೆಂದು ಪಟ್ಟಿ ಮಾಡಲಾಗಿರುವುದರಿಂದ ಅವುಗಳ ರಫ್ತು ನಿಷೇಧಿಸಲಾಗಿದೆ.

ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದರೆ, ಗರಿಷ್ಠ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಭಾರತದಲ್ಲಿ, ಈ ಜಾತಿಗಳು ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಕೆಲವು ಸೀಮಿತ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತವೆ. ಆಗ್ನೇಯ ಏಷ್ಯಾದ ಬೂದು ಮಾರುಕಟ್ಟೆಯಲ್ಲಿ ಅವುಗಳಿಗೆ ಹೆಚ್ಚಿನ ಬೇಡಿಕೆಯಿದೆ.

ಬಂಧಿತ ವ್ಯಕ್ತಿಗಳನ್ನು ದೇಬಾಶಿಶ್ ದೋಹುಟಿಯಾ (34), ಮನಾಶ್ ದೋಹುಟಿಯಾ (28) ಮತ್ತು ದೀಪಂಕರ ಘರ್ಫಾಲಿಯಾ (40) ಎಂದು ಗುರುತಿಸಲಾಗಿದೆ. ವಿಚಾರಣೆಯ ಸಮಯದಲ್ಲಿ, ಅವರು ಅರುಣಾಚಲ ಪ್ರದೇಶದಿಂದ ಟೋಕೆ ಗೆಕ್ಕೊಗಳನ್ನು ತಂದಿದ್ದು, ಪ್ರತಿಯೊಂದನ್ನು 60 ಲಕ್ಷ ರೂ.ಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ದಿಬ್ರುಗಢದಲ್ಲಿ ಟೋಕೇ ಗೆಕ್ಕೊ ಹಲ್ಲಿಗಳ ಕಳ್ಳಸಾಗಣೆ ಬಗ್ಗೆ ಸಿಕ್ಕ ಸುಳಿವಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಲು ವಿಶೇಷ ಕಾರ್ಯಪಡೆ (STF) ತಂಡವನ್ನು ರಚಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

“ಅದರಂತೆ, ವಿಶೇಷ ಕಾರ್ಯಪಡೆ (STF) ತಂಡವು ದಿಬ್ರುಗಢ ಜಿಲ್ಲಾ ಪೊಲೀಸರು ಮತ್ತು ವನ್ಯಜೀವಿ ನ್ಯಾಯ ಆಯೋಗದ ದಕ್ಷಿಣ ಏಷ್ಯಾ ಕಚೇರಿಯ ನಿಕಟ ಕಾರ್ಯಾಚರಣೆ ಮತ್ತು ಗುಪ್ತಚರದ ಮಾಹಿತಿಯೊಂದಿಗೆ ಮೋಹನ್ಬರಿ ಪ್ರದೇಶದಲ್ಲಿ ಇವರಿಗೆ ಬಲೆ ಬೀಸಿತು. ತಂಡವು ಮೋಹನ್ಬರಿ ಟಿನಿಯಾಲಿಯ ಸನ್ ಫೀಸ್ಟ್ ಧಾಬಾದಲ್ಲಿ ಮೂವರು ಶಂಕಿತ ಕಳ್ಳಸಾಗಣೆದಾರರನ್ನು ಗುರುತಿಸಿತು. ಅವರಲ್ಲಿ ಇಬ್ಬರು AS-23W-5506 ನೋಂದಣಿ ಸಂಖ್ಯೆಯನ್ನು ಹೊಂದಿರುವ ಬಿಳಿ ಕಾರಿನಲ್ಲಿ ಬಂದರು, ಮತ್ತು ಮತ್ತೊಬ್ಬರು AS-06AF-0276 ನೋಂದಣಿ ಸಂಖ್ಯೆಯನ್ನು ಹೊಂದಿರುವ ಮೋಟಾರ್ ಸೈಕಲ್‌ನಲ್ಲಿ ಬಂದನು” ಎಂದು ಅಸ್ಸಾಂ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಮೂವರು ವ್ಯಕ್ತಿಗಳು ಒಟ್ಟುಗೂಡಿದರು ಮತ್ತು ಸನ್ ಫೀಸ್ಟ್ ಧಾಬಾದೊಳಗೆ ಪ್ರವೇಶಿಸಿದರು. ಸ್ವಲ್ಪ ಸಮಯದ ನಂತರ, ಕಾರಿನಲ್ಲಿ ಬಂದ ಇಬ್ಬರಲ್ಲಿ ಒಬ್ಬ ಹೊರಬಂದು, ಕಾರಿನಿಂದ ಕೆಂಪು ಬಣ್ಣದ ಬೆನ್ನುಹೊರೆಯ ಚೀಲವನ್ನು ತೆಗೆದು ಧಾಬಾದೊಳಗೆ ಪ್ರವೇಶಿಸಿದನು. ಆ ಕ್ಷಣದಲ್ಲಿ, ಎಸ್‌ಟಿಎಫ್ ತಂಡವು ಧಾವಿಸಿ ಮೂವರನ್ನು ಬಂಧಿಸಿತು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.