ಬೆಳಗಾವಿ : ಚುನಾವಣೆ ಸಮೀಪಿಸುತ್ತಿದ್ದಂತೆ ಜೋರಾಗಿದೆ. ಈ ಬಾರಿ ಬೆಳಗಾವಿ ಜಿಲ್ಲೆಯ ಈ ವೈದ್ಯರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಒಲಿಯುವುದು ಬಹುತೇಕ ಖಚಿತವಾಗಿದೆ.

ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರದಲ್ಲಿ ಇದೀಗ ಕಾಂಗ್ರೆಸ್ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಸಂಚಲನ ಸೃಷ್ಟಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಖಾನಾಪುರ ಮತಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಅವರಿಗೆ ಈ ಸಲ ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಸಿಗುವುದು ಬಹುತೇಕ ಖಚಿತ ಎನಿಸಿದೆ. ಹೀಗಾಗಿ ಅವರು ಉತ್ತರಕನ್ನಡ ಜಿಲ್ಲೆ ಸೇರಿದಂತೆ ಕಿತ್ತೂರು ಮತ್ತು ಖಾನಾಪುರ ಮತಕ್ಷೇತ್ರಗಳಲ್ಲಿ ಎಡಬಿಡದೆ ಸಂಚಾರ ನಡೆಸಿ ಮತದಾರರ ಮನ ಗೆಲ್ಲುವ ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್ ಪ್ರಥಮ ಪಟ್ಟಿಯಲ್ಲೇ ಅವರ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ. ಜನರ ಜೊತೆ ನಿಕಟ ನಂಟು ಹೊಂದಿರುವ ಕಾರಣಕ್ಕೆ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆ ಎಂಬ ಕಾರಣಕ್ಕೆ ಈ ಬಾರಿ ಉತ್ತರ ಕನ್ನಡ ಮತಕ್ಷೇತ್ರದಲ್ಲಿ ಮಾರ್ಗರೆಟ್ ಆಳ್ವ ನಂತರ ಅವರಿಗೆ ಕಾಂಗ್ರೆಸ್ ಪಕ್ಷ ಮನ್ನಣೆ ನೀಡುವುದು ಬಹುತೇಕ ನಿಚ್ಚಳವಾಗಿದೆ.

ಕೈ ಟಿಕೆಟ್ ನೀಡಿ ಎಂದು ಅರ್ಜಿ ಹಾಕಿಲ್ಲ:
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲು ನನಗೆ ಆಸಕ್ತಿಯಿದ್ದು, ಪಕ್ಷದ ತೀರ್ಮಾನಕ್ಕೆ ಬದ್ಧನಿದ್ದೇನೆ ಎಂದು ಮಾಜಿ ಶಾಸಕಿ ಅಂಜಲಿ ನಿಂಬಾಳ್ಳ‌ರ್ ಸ್ಪಷ್ಟಪಡಿಸಿದರು. ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಟಿಕೆಟ್ ನೀಡಿ ಎಂದು ಅರ್ಜಿ ಹಾಕಿಲ್ಲ. ಕಾಂಗ್ರೆಸ್‌ನ ಮೊದಲ ಪಟ್ಟಿ ಒಂದು ವಾರದೊಳಗೆ ಬಿಡುಗಡೆಯಾಗಲಿದೆ. ಯಾರಿಗೆ ಟಿಕೆಟ್ ನೀಡಿದರೂ, ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ. ಆದರೆ ನನಗೆ ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಲು ಆಸಕ್ತಿಯಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರವು 8 ವಿಧಾನಸಭಾ ಕ್ಷೇತ್ರ ಒಳಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಹಾಗೂ ಕಿತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರು ಆಯ್ಕೆಯಾಗಿದ್ದಾರೆ. ಎಲ್ಲರೂ ಸೇರಿ ಚುನಾವಣೆ ಎದುರಿಸುತ್ತೇವೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ನಾವೆಲ್ಲ ಒಟ್ಟಾಗಿ ಶ್ರಮಿಸುವುದಾಗಿ ಅವರು ತಿಳಿಸಿದರು.