ಬೆಳಗಾವಿ : ಮಹಾರಾಷ್ಟ್ರದಲ್ಲಿ ಇದ್ದರೂ ಆಗಾಗ ಕರ್ನಾಟಕಕ್ಕೆ ಸೇರುತ್ತೇವೆ ಎಂದು ಹೋರಾಟ ನಡೆಸುತ್ತಿರುವ ಜತ್ತ ತಾಲೂಕಿನ ಕನ್ನಡಿಗರು ಇದೀಗ ಮತ್ತೊಮ್ಮೆ ತಾವು ಕರ್ನಾಟಕಕ್ಕೆ ಸೇರುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದಲ್ಲಿದ್ದರೂ ಅನೇಕ ಮೂಲಸೌಲಭ್ಯ
ಗಳಿಂದ ನಮ್ಮ ಗ್ರಾಮಗಳು ವಂಚಿತವಾಗಿವೆ. ಹೀಗಾಗಿ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಿ ಎಂದು ಮಹಾರಾಷ್ಟ್ರದ ಗಡಿ ಭಾಗದ ಜನರು ಅಥಣಿಯಲ್ಲಿ ಬುಧವಾರ ನಡೆದ
ಕಾರ್ಯಕ್ರಮಕ್ಕೆ ಬಂದು ಆಗ್ರಹಿಸಿರುವುದು ಗಮನಸೆಳೆಯಿತು.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿಯಲ್ಲಿ ಬುಧವಾರ ನಡೆದ ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆ ಸಮಾರಂಭಕ್ಕೆ ಮಹಾರಾಷ್ಟ್ರದ ಜತ್ತ ತಾಲೂಕಿನ ನೂರಾರು ಕನ್ನಡಿಗರು ನಾಮಫಲಕಗಳನ್ನು ಹಿಡಿದುಕೊಂಡು ಸಮಾರಂಭದಲ್ಲಿ ಭಾಗವಹಿಸಿದ್ದರು. ಗಡಿಭಾಗದ ಅನೇಕ ಹಳ್ಳಿಗಳು ನೀರಾವರಿ, ರಸ್ತೆ ಸುಧಾರಣೆ, ಕನ್ನಡ ಶಾಲೆಗಳ ಸುಧಾರಣೆ, ಕುಡಿಯುವ ನೀರು ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಆದ್ದರಿಂದ
ನಮ್ಮನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಬೇಕು. ಗಡಿ ಭಾಗದ ಕನ್ನಡ ಶಾಲೆಗಳಿಗೆ ವಿಶೇಷ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದರು. ಬೇಸಿಗೆ ಸಂದರ್ಭದಲ್ಲಿ ನಮಗೆ ಕುಡಿಯುವ ನೀರಿನ ಸಮಸ್ಯೆ ಇದ್ದು, ಕೊಟ್ಟಲಗಿ ಏತ ನೀರಾವರಿ ಯೋಜನೆ ಮೂಲಕ ನಮ್ಮ ಭಾಗದ ಕೆರೆಗಳಿಗೆ ನೀರು ತುಂಬಿಸಬೇಕು ಎಂಬ ಬೇಡಿಕೆಗಳನ್ನು ಅಥಣಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ಮನವಿ ಸಲ್ಲಿಸಿದರು. ಶಾಸಕ ಲಕ್ಷ್ಮಣ ಸವದಿ ಅವರು ತಮ್ಮ ಪ್ರಸ್ತಾವಿಕ ಭಾಷಣದಲ್ಲಿ ಗಡಿನಾಡಿನ ಕನ್ನಡಿಗರ ಸಮಸ್ಯೆ ಕುರಿತು ಪ್ರಸ್ತಾಪಿಸಿದಾಗ ಮಹಾರಾಷ್ಟ್ರದ ಜತ್ತ ತಾಲೂಕಿನ ನೂರಾರು ಕನ್ನಡಿಗರು ನಾಮಫಲಕಗಳನ್ನು ಕೈಯಲ್ಲಿ ಹಿಡಿದು ಎದ್ದು ನಿಂತು ಘೋಷಣೆಗಳನ್ನು ಕೂಗುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆದರು. ಒಟ್ಟಾರೆ ಕರ್ನಾಟಕ ಸರಕಾರದ ಯೋಜನೆಗಳು ಮತ್ತು ಮಾತೃಭಾಷೆಯ ಕಾರಣಕ್ಕೆ ಗಡಿನಾಡ ಕನ್ನಡಿಗರು ಆಗಾಗ ತಾವು ಕರ್ನಾಟಕಕ್ಕೆ ಸೇರ್ಪಡೆಯಾಗುವ ಮನದ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದಾರೆ.