ಬೆಳಗಾವಿ : ಕೆಎಲ್ಇ ಸಂಸ್ಥೆಯೇ ನನಗೆ ಸರ್ವಸ್ವ, ಸಪ್ತರ್ಷಿಗಳ ನೆನಹೆ ನನಗೆ ಉದಯ. ಅವರ ಮರೆವೇ ನನಗೆ ಅಸ್ತಮಾನ. ಅಂತಹ ಕೆ.ಎಲ್.ಇ. ಕಟ್ಟಿ ಬೆಳೆಸಿದ ಸಂಸ್ಥಾಪಕರನ್ನು ಶಿಕ್ಷಣ ಪರಿವಾರದವರನ್ನು ಮನಸಾರೆ ಸ್ಮರಿಸುತ್ತೇನೆ. ಕೆಎಲ್ಇ ಸಂಸ್ಥೆಯೇ ನನಗೆ ಏನೆಲ್ಲವನ್ನೂ ನೀಡಿದೆ, ಬೆಳೆಸಿದೆ. ಆದ್ದರಿಂದ ಸಮಾಜಕ್ಕಾಗಿ ನನಗೆ ಸಾಧ್ಯವಾದಷ್ಟು ಸೇವೆಯನ್ನು ನೀಡಲು ಪ್ರಯತ್ನಿಸಿದ್ದೇನೆ ಎಂದು ಡಾ.ಪ್ರಭಾಕರ ಕೋರೆ ಹೇಳಿದರು.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ 40 ವರ್ಷಗಳನ್ನು ಪೂರೈಸಿದ ನಿಮಿತ್ತವಾಗಿ ಕೆಎಲ್ಇ ಆಡಳಿತ ಮಂಡಳಿಯು ಅಭಿನಂದನಾ ಸಮಾರಂಭವನ್ನು 18 ಮೇ 2024 ರಂದು ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಿತ್ತು.
ನಾನು ಪುಟ್ಟ ಅಂಕಲಿಯ ಗ್ರಾಮದಿಂದ ಬಂದವನು. ಒಂದು ಮಹಾಸಂಸ್ಥೆಯ ಕಾರ್ಯಾಧ್ಯಕ್ಷನಾಗಿ ಆಯ್ಕೆಯಾಗಿ 40 ವರ್ಷಗಳ ಕಾಲ ಮುನ್ನಡೆಸಿ ವಿಶ್ವಮಾನ್ಯ ಮಾಡಿದ್ದು ಪವಾಡವೇ. ಜಗತ್ತಿನಲ್ಲಿಯ ಅತ್ಯುತ್ತಮವಾದದ್ದನ್ನು ನೋಡಿದಾಗ ಅದನ್ನು ನಮ್ಮ ಕೆಎಲ್ಇ ಸಂಸ್ಥೆಯಲ್ಲಿಯೂ ಅಳವಡಿಸಿಕೊಳ್ಳುತ್ತಾ ಹೋದೆ.
ಕೆಎಲ್ಇ ಸಂಸ್ಥೆಯು ಶಿಕ್ಷಕರಿಂದ ಬೆಳೆದಿದೆ : ಕೆಎಲ್ಇ ಸಂಸ್ಥೆಯನ್ನು ಸ್ಥಾಪಿಸಿದವರು 7 ಜನ ಶಿಕ್ಷಕರು, ಅವರ ತ್ಯಾಗ ಬಹುದೊಡ್ಡದು. ಅಂತಹ ಅಸಂಖ್ಯ ಶಿಕ್ಷಕರು ಇಲ್ಲಿ ತನು-ಮನ-ಧನದಿಂದ ದುಡಿದಿದ್ದಾರೆ. ಅವರು ಗುಣಾತ್ಮಕವಾದ ಶಿಕ್ಷಣವನ್ನು ನೀಡಿದರೆ ಫಲವೇ ಕೆಎಲ್ಇ ಸಂಸ್ಥೆಯು ಅಗಾಧವಾಗಿ ಬೆಳೆಯಲು ಸಾಧ್ಯವಾಯಿತು.
ನನಗೆ ಸಹಕಾರ ನೀಡಿದವರ ಸ್ಮರಿಸುವೆ: ನಾನು ಒಬ್ಬನೇ ಕೆ. ಎಲ್. ಇ. ಸಾಧನೆಗಳಿಗೆ ಕಾರಣನಾದೆ ಎಂಬ ‘ಅಹಂ’ ನನಗಿಲ್ಲ, ಒಬ್ಬನಿಂದ ಏನೂ ಆಗಲಾರದು. ನನಗೆ 40 ವರ್ಷಗಳ ಕಾಲ ತೆರೆದ ಮನಸ್ಸಿನ ಸಹಕಾರ ನೀಡಿದ ನನ್ನ ಆಡಳಿತ ಮಂಡಳಿ ಸದಸ್ಯರ ಸಕಾರಾತ್ಮಕ ನಿಲುವುಗಳಿಂದ ನಾನು ಯಶಸ್ವಿಯಾದೆ, ಅನೇಕ ಬಾರಿ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆಯಾಗಿ ಯಶಸ್ವಿಯಾದೆ, ಚುನಾವಣೆಗಳನ್ನು ತಪ್ಪಿಸಿದೆ ಎಂದರು. ನನ್ನ 40 ವರ್ಷಗಳ ಆಡಳಿತ ಹೂವಿನ ಹಾಸಿಗೆ ಆಗಿರಲಿಲ್ಲ. ಬದಲಾಗಿ ಮುಳ್ಳಿನ ಹಾಸಿಗೆಯಂತೆ ಕೂಡ ಅನುಭವ ಮಾಡಿದ್ದೇನೆ. ಪ್ರಜಾಪ್ರಭುತ್ವದಲ್ಲಿ ವಿರೋಧ ಸಹಜ. ಕರ್ನಾಟಕ ಸರ್ಕಾರದಲ್ಲಿದ್ದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಜೊತೆಗೆ ನಾನು ಇಂದಿಗೂ ಉತ್ತಮ ಸಂಬಂಧಗಳನ್ನು ಹೊಂದಿದ್ದೇನೆ.
ಕೆಎಲ್ಇ ದಾನಿಗಳಿಂದ ಬೆಳೆದಿದೆ : ನಮ್ಮ ಸಂಸ್ಥೆಯನ್ನು ದಾನಿಗಳ ಉದಾರ ಕೊಡುಗೆಯಿಂದಲೇ 38 ರಿಂದ 310 ಕ್ಕೆ ವಿಸ್ತರಿಸಿದ್ದು ನಿಜವಾದ ಇತಿಹಾಸ. ಕರ್ನಾಟಕ ಹಾಗೂ ಮಹಾರಾಷ್ಟ್ರ ಮೊದಲ್ಗೊಂಡು 16 ಆಸ್ಪತ್ರೆಗಳು ಕಾರ್ಯನಿರ್ವಸುತ್ತ ಅಂತರಾಷ್ಟ್ರೀಯ ಮಾನ್ಯತೆ ಸಂಪಾದಿಸಿರುವುದು ನನಗೆ ಖುಷಿ ಕೊಟ್ಟಿದೆ. ಅಲೋಪಥಿಕ್-ಆಯುರ್ವೇದ-ಹೋಮಿಯೋಪಥಿಕ್ ಈ 3ನ್ನು ಜನಸೇವೆಗೆ ಅರ್ಪಿಸಿದ್ದೇನೆ.
ಕೆಎಲ್ಇ ಸಂಸ್ಥೆ ನನ್ನ ರಕ್ತದಲ್ಲಿ ಬೆರೆತು ನಿಂತಿದೆ : ನಾನು ಏನೇ ಆಗಿರಲಿ, ಏನೇ ಪದವಿ – ಪ್ರಶಸ್ತಿಗಳಿಗೆ ಭಾಜನ ಆಗಿರಲಿ ಇದೆಲ್ಲ ಕೆಎಲ್ಇ ಸಂಸ್ಥೆಯಿಂದಲೇ ಎಂಬುದನ್ನು ಪ್ರಾಂಜಲ ಮನಸ್ಸಿನಿಂದ ಹೇಳಬಲ್ಲೆ. ಎಲ್ಲಿಯ ವರೆಗೆ ನನ್ನಲ್ಲಿ ಶಕ್ತಿಯಿದೆಯೋ ನಾನು ಸಂಸ್ಥೆಗಾಗಿ ಹಾಗೂ ಸಮಾಜಕ್ಕಾಗಿ ದುಡಿಯುತ್ತೇನೆ.
ನನ್ನ ಕುಟುಂಬದ ಸಹಕಾರ ಮರೆಯಲಾರೆ : ಸಂಸ್ಥೆಯ ವಿಸ್ತಾರಕ್ಕೆ ಎಲ್ಲರೂ ಸಹಾಯ ಸಹಕಾರವನ್ನು ಪಡೆದಿದ್ದೇನೆ. ನಮ್ಮ ಇಡೀ ಕೋರೆ ಕುಟುಂಬದ ತ್ಯಾಗ ಇದರಲ್ಲಿ ಇದೆ. ನನ್ನ ಶ್ರೀಮತಿಯವರು ಮನೆಯ ಜವಾಬ್ದಾರಿಯನ್ನು ಹೊತ್ತು ನಡೆದರು. ನನಗೆ ಸಾಮಾಜಿಕ ಸೇವೆ ಮಾಡಲು ಸಾಧ್ಯವಾಯಿತು ಎಂದು ಡಾ.ಪ್ರಭಾಕರ ಕೋರೆಯವರು ಹೇಳಿದರು.

ಗೌರವ ಅತಿಥಿಗಳಾಗಿ ಆಗಮಿಸಿದ್ದ ಬಾಗಲಕೋಟೆ ಮಾಜಿ ಶಾಸಕ ಹಾಗೂ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ವೀರಣ್ಣ ಚರಂತಿಮಠ ಮಾತನಾಡಿ,
ಇಂದು ಏಷ್ಯಾದ ಬಹುದೊಡ್ಡ ಭಾರತೀಯ ಶಿಕ್ಷಣ ಸಂಸ್ಥೆಯಾಗಿ ಬೆಳೆದಿರುವುದು ಹೆಮ್ಮೆ ಮತ್ತು ಅಭಿಮಾನ ಕಳೆದ ಎಂಟು ವರ್ಷಗಳಿಂದ ಶೈಕ್ಷಣಿಕ ಸಾಮಾಜಿಕ ಕಾರ್ಯಗಳ ಅವಿಸ್ಮರಣೀಯ ಭಾರತದ ಶೈಕ್ಷಣಿಕ ಸಾಮಾಜಿಕ ಚರಿತ್ರೆಯಲ್ಲಿ ಶಿಕ್ಷಣದ ಮೂಲಕ ಸಮಾಜದ ಸಂಸ್ಕೃತಿ, ಸೇವೆಗೆ ಹೊಸ ಭಾಷ್ಯ ಬರೆದವರು ಡಾ. ಪ್ರಭಾಕರ ಕೋರೆ ಅವರು. ಸಂಸ್ಥೆಯ ಶೈಕ್ಷಣಿಕ ಸಾಮಾಜಿಕ ಮತ್ತು ಆರೋಗ್ಯ ಸೇವೆಗಳ ಮೂಲಕ ವಿಶ್ವಮಾನ್ಯ ಸಂಸ್ಥೆಯನ್ನಾಗಿ ಬೆಳೆಸಿದ್ದಾರೆ. ಸತ್ಯಸಂಕಲ್ಪ ಬಲದಿಂದ ಕೆಲಸ ಮಾಡಿ ಮುಟ್ಟಿದ್ದೆಲ್ಲ ಒಳ್ಳೆಯದನ್ನ ನೀಡುವ ಸ್ಪರ್ಶಮಣಿ ಶಕ್ತಿಯ ವ್ಯಕ್ತಿತ್ವದವರು ಎಂದರು.

ಡಾ.ಪ್ರಭಾಕರ ಕೋರೆಯವರು ಉತ್ತರ ಕರ್ನಾಟಕದ ವೀರಶೈವ-ಲಿಂಗಾಯತ ಶಿಕ್ಷಣ ಸಂಸ್ಥೆಗಳು ಮಾಡಿದ ಮತ್ತು ಮಾಡುತ್ತಿರುವ ಶೈಕ್ಷಣಿಕ ಸೇವೆಗೆ ಒಂದು ಗೌರವ ಘನತೆ ಪ್ರಾರಂಭವಾಗಿದ್ದು ಶ್ರೀಯುತ ಕೋರೆಯವರ ದೂರದೃಷ್ಟಿ ಕ್ರಿಯಾಶೀಲತೆ ಮತ್ತು ಸಾಮಾಜಿಕ ಕಳಕಳಿ ಎಂದು ನಾನು ಭಾವಿಸುತ್ತೇನೆ. ಶಿಕ್ಷಣ ಕ್ಷೇತ್ರದ ಧ್ರುವತಾರೆ. ಅವರಿಗೆ ಯಾವುದು ಅಸಾಧ್ಯವಲ್ಲ. ಎಲ್ಲವನ್ನು ಸಾಧಿಸಿ ತೋರಿಸಿ ಇಂದಿನ ಯುವಜನಾಂಗಕ್ಕೆ ಮಾದರಿಯಾಗಿದ್ದಾರೆ. ಕೆಎಲ್ಇ ಕಟ್ಟಿದ ಏಳು ಜನ ಶಿಕ್ಷಕರ ಕನಸ್ಸನ್ನು ಸಾಕಾರಗೊಳಿಸಿ ರಾಷ್ಟ್ರಕ್ಕೆ ಅದ್ಭುತವಾದ ಕೊಡುಗೆಯನ್ನು ನೀಡಿದ್ದಾರೆ. ಸಂಸ್ಥೆಯನ್ನು ಕಟ್ಟುವುದು ಮುಖ್ಯವಲ್ಲ, ಅದನ್ನು ಮುಂದುವರಿಸಿಕೊಂಡು ಹೋಗುವುದು ಕಷ್ಟ. ಆದರೆ ಡಾ.ಕೋರೆಯವರು ಅದನ್ನು ಸಾಧಿಸಿದ್ದಾರೆ. ಅವರಿಂದ ಸಂಸ್ಥೆಯು ಇನ್ನೂ ಹೆಚ್ಚು ವಿಸ್ತರಿಸಲೆಂದು ಹೇಳಿದರು.

ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಅಲ್ಲಮ ಗುರುಬಸವರಾಜ,ಈಗಾಗಲೇ ನಾವು 58 ಅಂಗ ಸಂಸ್ಥೆಗಳನ್ನು ಹೊಂದಿದ್ದೇವೆ. ನಾವು ಕೆಎಲ್‌ಇ ಸಂಸ್ಥೆಯನ್ನು ಮಾದರಿಯನ್ನಾಗಿಟ್ಟುಕೊಂಡು ಇನ್ನೂ ಹೆಚ್ಚಿನ ಸಂಸ್ಥೆಗಳನ್ನು ಹುಟ್ಟುಹಾಕಿ ಗುಣಾತ್ಮಕ ಶಿಕ್ಷಣವನ್ನು ನೀಡಲು ಸಕಲ ವ್ಯವಸ್ಥೆಯನ್ನು ಮಾಡುತ್ತೇವೆ. ನಮಗೆಲ್ಲ ಡಾ. ಪ್ರಭಾಕರ ಕೋರೆ ಅವರು ಮಾದರಿ. ಲಿಂಗಾಯತ ಸಂಸ್ಥೆಗಳನ್ನು ಹೇಗೆ ಬೆಳೆಸಬೇಕೆಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶಶೀಲ್ ನಮೋಶಿ ಮಾತನಾಡಿ, ಒಂದೇ ಬಾರಿಗೆ ಹೈದರಾಬಾದ್ ಶಿಕ್ಷಣ ಸಂಸ್ಥೆ, ಕೆಎಲ್‌ಇ ಮತ್ತು ಶಾಮನೂರು ಶಿವಶಂಕರಪ್ಪ ಅವರ ವೈದ್ಯಕೀಯ ಮಹಾವಿದ್ಯಾಲಯಗಳನ್ನು ಸ್ಥಾಪಿಸಲು ಎಸ್‌ ನಿಜಲಿಂಗಪ್ಪ ಅವರು ಅನುಮತಿ ನೀಡಿದರು. ಕೆಎಲ್‌ಇ ಸಂಸ್ಥೆ ಸಾಕಷ್ಟು ಬೆಳೆದಿದೆ. ನಾವು ಹಿಂದೆ ಉಳಿದಿದ್ದೇವೆ. ನಾವು ಇದೇ ರೀತಿ ಬೆಳೆಸಲು ಸಹಾಯ ಸಹಕಾರ ನೀಡಬೇಕೆಂದು ಕೋರಿದರು.

ಕೆಎಲ್ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಮಹಾಂತೇಶ ಕವಟಗಿಮಠ, ಕೆಎಲ್‌ಇ ಯುಎಸ್‌ಎಂ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ, ಬಿವಿಬಿ ಉಪಕುಲಪತಿ ಡಾ.ಅಶೋಕ ಶೆಟ್ಟರ ಅಭಿನಂದನಾ ನುಡಿಗಳನ್ನಾಡಿದರು.

ಕೆಎಲ್ಇ ಆಡಳಿತ ಮಂಡಳಿಯ ಸದಸ್ಯರು ಹಾಗೂ ಗೌರವ ಅತಿಥಿಗಳು ಡಾ.ಪ್ರಭಾಕರ ಕೋರೆ ಹಾಗೂ ಆಶಾ ಕೋರೆಯವರನ್ನು ಸತ್ಕರಿಸಿ ಅಭಿನಂದಿಸಿದರು. ಡಾ.ಪ್ರಭಾಕರ ಕೋರೆಯವರ 40 ವರ್ಷಗಳ ಪಯಣವನ್ನು ಹೊತ್ತ ‘ರತ್ನರಾಜ’ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು. ಡಾ.ವಿ.ಎಸ್. ಸಾಧುನವರ, ಜಯಾನಂದ ಮುನವಳ್ಳಿ,ವೈ.ಎಸ್.ಪಾಟೀಲ, ಶಂಕರಣ್ಣ ಮುನವಳ್ಳಿ, ಅನಿಲ ಪಟ್ಟೇದ, ಬಾಬಣ್ಣ ಮೆಟಗುಡ್, ಪ್ರವೀಣ ಬಾಗೇವಾಡಿ, ಅಮಿತ ಕೋರೆ, ಎಂ.ಸಿ.ಕೊಳ್ಳಿ ಉಪಸ್ಥಿತರಿದ್ದರು.
ಕೆಎಲ್ಇ ಸಂಸ್ಥೆ ಅಧ್ಯಕ್ಷ ಮಹಾಂತೇಶ ಕೌಜಲಗಿ ಸ್ವಾಗತಿಸಿದರು. ಡಾ.ಮಹೇಶ ಗುರನಗೌಡರ ನಿರೂಪಿಸಿದರು. ಕೆಎಲ್ಇ ಆಡಳಿತ ಮಂಡಳಿಯ ಸದಸ್ಯ ಡಾ. ವಿ ಎಸ್‌ ಸಾಧುನವರ ವಂದಿಸಿದರು.