ಆಗ್ರಾ :
ಉತ್ತರ ಪ್ರದೇಶದ ಆಗ್ರಾದಲ್ಲಿ ನಿರ್ಮಿಸಲು ಸುಮಾರು 104 ವರ್ಷಗಳನ್ನು ತೆಗೆದುಕೊಂಡ ‘ರಾಧಾ ಸ್ವಾಮಿ ಸಮಾಧಿ’ ಎಂದೂ ಕರೆಯಲ್ಪಡುವ ಸೋಮಿ ಬಾಗ್ ಸಮಾಧಿ ವಿಶ್ವ ಪರಂಪರೆಯ ತಾಣವಾದ ತಾಜ್ ಮಹಲಿಗೆ ಹೊಸ ಪ್ರತಿಸ್ಪರ್ಧಿಯಾಗಿದೆ.
ಆಗ್ರಾದಲ್ಲಿನ ಸೋಮಿ ಬಾಗ್‌ ಸಮಾಧಿ ಬಿಳಿ ಅಮೃತಶಿಲೆಯಿಂದ ನಿರ್ಮಿಸಲಾಗಿದ್ದು, ಈ ನಿರ್ಮಾಣಕ್ಕೆ 104 ವರ್ಷಗಳು ಬೇಕಾಯಿತು. ತಾಜ್ ಮಹಲ್‌ನಿಂದ ಕೇವಲ 12 ಕಿಲೋಮೀಟರ್ ದೂರದಲ್ಲಿರುವ ನಗರದ ದಯಾಲ್‌ಬಾಗ್ ಪ್ರದೇಶದ ಸೋಮಿ ಬಾಗ್ ಕಾಲೋನಿಯಲ್ಲಿರುವ ಅಮೃತಶಿಲೆಯ ಅದ್ಭುತ ನಿರ್ಮಾಣವಾದ ಸೋಮಿ ಬಾಗ್‌ ಸಮಾಧಿಯು ಅಧ್ಯಾತ್ಮಿಕ ಒಲವು ಹೊಂದಿರುವ ಪ್ರವಾಸಿಗರನ್ನು ಸೆಳೆಯುತ್ತಿದೆ.

ಸೋಮಿ ಬಾಗ್‌ ಸಮಾಧಿಯು ರಾಧಾಸೋಮಿ ಪಂಥದ ಸಂಸ್ಥಾಪಕರ ಸಮಾಧಿಯಾಗಿದೆ. ಇದನ್ನು ಈಗ ತಾಜ್‌ ಮಹಲಿನ ಪ್ರತಿಸ್ಪರ್ಧಿ ಎಂದು ಪರಿಗಣಿಸಲಾಗುತ್ತಿದೆ. ಆದಾಗ್ಯೂ, ಸೋಮಿ ಬಾಗ್‌ ಗೆ ಸಂಬಂಧಿಸಿದವರು , ಇದು ಅಕ್ಷರಶಃ ‘ಭಗವಂತನ ಉದ್ಯಾನ’, ಹೀಗಾಗಿ ಇದು ತಾಜ್‌ ಮಹಲಿಗೆ ಪ್ರತಿಸ್ಪರ್ಧಿಯಲ್ಲ ಎಂದು ಹೇಳುತ್ತಾರೆ.
ಸೋಮಿ ಬಾಗ್ ಇತಿಹಾಸ…
ಸೋಮಿ ಬಾಗ್ ಸಮಾಧಿಯನ್ನು 19ನೇ ಶತಮಾನದಲ್ಲಿ ಅಧ್ಯಾತ್ಮಿಕ ಸಾಧನೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ರಾಧಾಸೋಮಿ ಪಂಥದ ಸಂಸ್ಥಾಪಕ ಪರಮ ಪುರುಷ ಪೂರಣ್ ಧಾನಿ ಸ್ವಾಮೀಜಿ ಮಹಾರಾಜ್ ಅವರ ನೆನಪಿಗಾಗಿ ನಿರ್ಮಿಸಲಾಗಿದೆ.

ಇದನ್ನು ನಿರ್ಮಿಸುವ ಉದ್ದೇಶದಿಂದ ಪೂರಣ್ ಧಾನಿ ಸ್ವಾಮೀಜಿ ಮಹಾರಾಜ್ ಅವರು ಇದನ್ನು ಖರೀದಿಸಿದರು. ಆ ಸಮಯದಲ್ಲಿ, ಸಾಧುಗಳು ಇಲ್ಲಿ ಸ್ವಾಮೀಜಿ ಮಹಾರಾಜ್‌ ಅವರಿಗೆ ಮನೆ ನಿರ್ಮಿಸಲು ಸಲಹೆ ನೀಡಿದರು, ಆದರೆ ಅವರು ಇಲ್ಲಿ ಪೂಜಾ ಸ್ಥಳ ನಿರ್ಮಾಣಕ್ಕೆ ಯೋಜಿಸಿದರು. ನಂತರ ಅವರ ನಿಧನರಾದ ನಂತರ, ಅವರು ನಿರ್ಮಿಸಲು ಯೋಜಿಸಿದ ಸ್ಥಳದಲ್ಲಿಯೇ ಅವರ ಸಮಾಧಿ ನಿರ್ಮಿಸಲಾಯಿತು.
ಈಗ, ಈ ಸ್ಥಳವು ಧ್ಯಾನಕ್ಕಾಗಿ ಮತ್ತು ರಾಧಾ ಸೋಮಿ ಸತ್ಸಂಗ ಬಿಯಾಸ್ ಸಂಪ್ರದಾಯದ ಅನುಯಾಯಿಗಳಿಗೆ ಅಧ್ಯಾತ್ಮ ಸ್ಥಳವಾಗಿದೆ. ಈ ಪಂಥವು ಉತ್ತರ ಪ್ರದೇಶ, ಕರ್ನಾಟಕ, ಪಂಜಾಬ್ ಮತ್ತು ವಿದೇಶಗಳಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದೆ.

1904 ರಲ್ಲಿ ಪ್ರಾರಂಭ…
ಸೋಮಿ ಬಾಗ್ ಸಮಾಧಿಯ ನಿರ್ಮಾಣವು 1904 ರಲ್ಲಿ ಪ್ರಾರಂಭವಾಯಿತು ಮತ್ತು 2023 ರಲ್ಲಿ ಪೂರ್ಣಗೊಂಡಿತು. ಚಕ್ರವರ್ತಿ ಷಹಜಹಾನ್ ನಿರ್ದೇಶನದ ಅಡಿಯಲ್ಲಿ ತಾಜ್ ಮಹಲ್‌ ನಿರ್ಮಿಸಲು 22 ವರ್ಷಗಳು ಬೇಕಾಯಿತು. ಆದರೆ ಸೋಮಿ ಬಾಗ್ ಸಮಾಧಿಯ ನಿರ್ಮಾಣಕ್ಕೆ ಒಂದು ಶತಮಾನಕ್ಕೂ ಹೆಚ್ಚು ಕಾಲ ಸಮಯ ಬೇಕಾಯಿತು. ಸೋಮಿ ಬಾಗ್ ಸಮಾಧಿಯನ್ನು ರಾಧಾಸೋಮಿ ನಂಬಿಕೆಯ ಸಂಸ್ಥಾಪಕ ಪರಮ ಪುರುಷ ಪೂರಣ್ ಧಾನಿ ಸ್ವಾಮೀಜಿ ಮಹಾರಾಜ್ ಅವರಿಗೆ ಸಮರ್ಪಿಸಲಾಗಿದೆ.
ಮೂಲ ಸಮಾಧಿಯು ಸರಳವಾದ ಬಿಳಿ ಮರಳುಗಲ್ಲಿನ ರಚನೆಯಾಗಿತ್ತು. 1904 ರಲ್ಲಿ, ಅಲಹಾಬಾದ್‌ನ ವಾಸ್ತುಶಿಲ್ಪಿಯೊಬ್ಬರು ಹೊಸ ಸಮಾಧಿಯನ್ನು ವಿನ್ಯಾಸಗೊಳಿಸಿದರು. ವಸ್ತುಗಳ ಕೊರತೆ ಮತ್ತು ಕಾರ್ಮಿಕರ ವಲಸೆ ಸೇರಿದಂತೆ ವಿವಿಧ ಸವಾಲುಗಳಿಂದಾಗಿ ನಿರ್ಮಾಣವು ನಿಧಾನಗತಿಯಲ್ಲಿ ಸಾಗುತ್ತ ಬಂತು, ಆದರೆ ಕುಶಲಕರ್ಮಿಗಳು ಮತ್ತು ಭಕ್ತರ ಸಮರ್ಪಣೆಯು ಅಂತಿಮವಾಗಿ ಇದನ್ನು ಪೂರ್ಣಗೊಳ್ಳುವಂತೆ ಮಾಡಿತು.

ವಾಸ್ತುಶಿಲ್ಪದ ವೈಭವ…
ಸೋಮಿ ಬಾಗ್ ಸಮಾಧಿಯು 193 ಅಡಿ ಎತ್ತರದ ರಚನೆಯಾಗಿದ್ದು, ಸಂಪೂರ್ಣವಾಗಿ ರಾಜಸ್ಥಾನದ ಮಕ್ರಾನಾದಿಂದ ತಂದ ಬಿಳಿ ಅಮೃತಶಿಲೆಯಿಂದ ಕತ್ತಲ್ಪಟ್ಟಿದೆ, ತಾಜ್ ಮಹಲ್‌ ನಿರ್ಮಾಣಕ್ಕೆ ಬಳಸಿದ ಮಾರ್ಬಲ್‌ ಅನ್ನೇ ಇದಕ್ಕೂ ಬಳಸಲಾಗಿದೆ. ಇದು 52 ಸ್ತಂಭಗಳ ಮೇಲೆ ಮೇಲೆ ನಿಂತಿದೆ. ಈ ಕಟ್ಟಡದ ಶಿಖರವು 31.4 ಅಡಿ ಇದ್ದು, ಚಿನ್ನದಿಂದ ಲೇಪಿತವಾಗಿದೆ. ಈ ಕಟ್ಟಡವು ತಾಜ್‌ ಮಹಲ್‌ಗಿಂತಲೂ ಎತ್ತರವಾಗಿದೆ. ದೆಹಲಿಯಿಂದ ತರಲಾದ ಕ್ರೇನ್ ಬಳಸಿ ಈ ಶಿಖರವನ್ನು ಇಡಲಾಗಿದೆ, ಇದು ಸಂಕೀರ್ಣವಾದ ಮತ್ತು ವಿಶೇಷವಾದ ನಿರ್ಮಾಣ ತಂತ್ರಗಳನ್ನು ಇಲ್ಲಿ ಬಳಸಲಾಗಿದೆ.
ಸಮಾಧಿಯು ವಿವಿಧ ವಾಸ್ತುಶಿಲ್ಪದ ಶೈಲಿಗಳನ್ನು ಸಂಯೋಜಿಸುತ್ತದೆ, ಇದು ಯಾವುದೇ ನಿರ್ದಿಷ್ಟ ಆಧುನಿಕ ಅಥವಾ ಸಾಂಪ್ರದಾಯಿಕ ಶೈಲಿಗೆ ಅನುಗುಣವಾಗಿಲ್ಲ. ಈ ಕಟ್ಟಡವು ಮಧ್ಯ ಮತ್ತು ದಕ್ಷಿಣ ಭಾರತದಲ್ಲಿನ ನದಿಪಾತ್ರಗಳಿಂದ ಪಡೆದ ಕಲ್ಲಿನ ಕೆತ್ತನೆಗಳು ಮತ್ತು ಪಾಕಿಸ್ತಾನದ ನೌಶೆರಾದಿಂದ ವೈವಿಧ್ಯಮಯ ಮೊಸಾಯಿಕ್ ಕಲ್ಲುಗಳ ಅಲಂಕಾರಗಳನ್ನು ಒಳಗೊಂಡಿದೆ.

ತಾಜ್ ಮಹಲ್
ನಿರ್ಮಾಣ: 1632-1653
ನಿರ್ಮಿಸಿದವರು: ಚಕ್ರವರ್ತಿ ಷಹಜಹಾನ್
ಉದ್ದೇಶ: ಷಹಜಹಾನ್‌ನ ಪತ್ನಿ ಮುಮ್ತಾಜ್ ಮಹಲ್‌ಗೆ ಸಮಾಧಿ
ವಸ್ತುಗಳು: ಬಿಳಿ ಅಮೃತಶಿಲೆ, ಅರೆ ಅಮೂಲ್ಯ ಕಲ್ಲುಗಳು
ಶೈಲಿ: ಮೊಘಲ್ ವಾಸ್ತುಶಿಲ್ಪ
ಪ್ರಾಮುಖ್ಯತೆ: ಶಾಶ್ವತ ಪ್ರೀತಿಯ ಸಂಕೇತ ಮತ್ತು ಯುನೆಸ್ಕೊ (UNESCO) ವಿಶ್ವ ಪರಂಪರೆಯ ತಾಣ

ಸೋಮಿ ಬಾಗ್ ಸಮಾಧಿ
ನಿರ್ಮಾಣ: 1904-2023
ನಿರ್ಮಿಸಿದವರು: ರಾಧಾಸೋಮಿ ನಂಬಿಕೆಯ ಅನುಯಾಯಿಗಳು
ರಾಧಾಸೋಮಿ ಪಂಥದ ಸಂಸ್ಥಾಪಕ ಸ್ವಾಮೀಜಿ ಮಹಾರಾಜರ ಸಮಾಧಿ
ರಚನೆ: ಬಿಳಿ ಅಮೃತಶಿಲೆ, ಅರೆ-ಪ್ರಶಸ್ತ ಕಲ್ಲುಗಳು, ಚಿನ್ನದ ಲೇಪನ
ಶೈಲಿ: ಓರಿಯೆಂಟಲ್ ಪರಿಕಲ್ಪನೆಯೊಂದಿಗೆ ಸಂಯೋಜಿತ ವಾಸ್ತುಶಿಲ್ಪದ ಶೈಲಿಗಳು
ಮಹತ್ವ: ಅಧ್ಯಾತ್ಮದ ಸಂಕೇತ