ಬೆಳಗಾವಿ :
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರಕಾರ, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ನವ ದೆಹಲಿ ಇವರಿಂದ ಪ್ರಾಯೋಜಿತ ಡಿಜಿಟಲ್ ಸಾಮಾಜಿಕ ಮಾಧ್ಯಮಗಳ ಮೂಲಕ ವಿಜ್ಞಾನ ಸಂವಹನ ಕಾರ್ಯಾಗಾರವು ಬಿ.ವಿ.ವಿ. ಶಿಕ್ಷಣ ಮಹಾ ವಿದ್ಯಾಲಯ ಬಾಗಲಕೋಟೆ ಮತ್ತು ಸೇವಕ ಬೆಳಗಾವಿ ಇವರ ಆಶ್ರಯದಲ್ಲಿ ಬಾಗಲಕೋಟದ ಬಿ. ವಿ. ವಿ. ಶಿಕ್ಷಣ ಮಹಾವಿದ್ಯಾಲಯದ ಸಭಾ ಭವನದಲ್ಲಿ ಇಂದು ಉದ್ಘಾಟನೆಯಾಯಿತು.

ಸಸಿಗೆ ನೀರು ಎರೆಯುವ ಮೂಲಕ ಡಾ. ಪ್ರವೀಣ ಡಿ.ಎಸ್ ಉದ್ಘಾಟಿಸಿದ ಅವರು “ಸಾಮಾಜಿಕ ಮಾಧ್ಯಮದ ಮೂಲಕ ನಾವು ಇಂದು ಬದುಕು ಸಾಗಿಸುತ್ತಿದ್ದೇವೆ. ಇಂದಿನ ಕಾಲದಲ್ಲಿ ತಂತ್ರಜ್ಞಾನವನ್ನು ಬಿಟ್ಟು ಜೀವನ ಸಾಗಿಸುವುದು ಅಸಾಧ್ಯವಾಗಿದೆ. ಶಿಕ್ಷಕರಾದವರು ಸಾಮಾಜಿಕ ಮಾಧ್ಯಮದವನ್ನು ವಿವಿಧ ರೀತಿಯಲ್ಲಿ ಹೇಗೆ ಬಳಸಬಹುದು ಎಂಬುವುದನ್ನು ಕಲಿತುಕೊಳ್ಳಬೇಕು. ಆನ್ಲೈನ್ ಮೂಲಕ ವಿವಿಧ ಕೋರ್ಸ್ ಗಳನ್ನು ಉಚಿತವಾಗಿ ಕಲಿತುಕೊಳ್ಳಬೇಕು. ಉದಾಹರಣೆಗೆ MOOCS ಮತ್ತು ಸ್ವಯಂ ಉಚಿತ ಆನ್ಲೈನ್ ಕೋರ್ಸ್ ಗಳು. ತಂತ್ರಜ್ಞಾನ ಬದಲಾದಂತೆ ನಾವು ಅವುಗಳನ್ನು ಕಲಿತುಕೊಂಡು ಬದುಕುತ್ತಾ ಹೋಗಬೇಕು. ಮುಂದೆ ಶಿಕ್ಷಕರು ಧ್ವನಿ ಮತ್ತು ಛಾಯಾಗ್ರಹಣದ ಮೂಲಕ ಶಿಕ್ಷಣ ಹೇಗೆ ಶಿಕ್ಷಣ ನೀಡಬಹುದು ಎಂಬುದನ್ನು ಪ್ರಾತ್ಯಕ್ಷಿಕವಾಗಿ ಈ ಕಾರ್ಯಾಗಾರದಲ್ಲಿ ಕಲಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಡಾ. ರಾಜೇಶ್ವರಿ ತೆಗ್ಗಿ ” ಯಾವುದೇ ವಿಷಯ ಕಲಿಯುವಾಗ ಮತ್ತು ಕೆಲಸ ಮಾಡುವಾಗ ನಮ್ಮ ತಲೆ, ಹೃದಯ ಮತ್ತು ಕೈಗಳನ್ನು ಸರಿಯಾಗಿ ಇಟ್ಟುಕೊಂಡು ಕಲಿತದ್ದೆ ಆದರೆ ಮತ್ತು ಕೆಲಸ ಮಾಡಿದ್ದೆ ಆದರೆ ನಾವು ಇಂದಿನ ತಂತ್ರಜ್ಞಾನ ಯುಗದಲ್ಲಿ ಯಶಸ್ವಿಯಾಗಬಹುದು. ಸಮೂಹ ಮಾಧ್ಯಮಗಳು ಇಲ್ಲದೇ ಇದ್ದರೆ ಒಂದು ಕ್ಷಣ ಕೂಡ ಇರಲು ಸಾಧ್ಯವಿಲ್ಲ. ಅತ್ಯುತ್ತಮ ಶಿಕ್ಷಕರು ಆಗ ಬೇಕಾದರೆ ಈ ಕಾರ್ಯಾಗಾರದಲ್ಲಿ ಕಲಿಸುವ ಡಿಜಿಟಲ್ ಸಾಮಾಜಿಕ ಮಾಧ್ಯಮಗಳನ್ನು ಶಿಕ್ಷಕರ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಕಾರ್ಯಾಗಾರದಲ್ಲಿ ಕಲಿತಂತಹ ವಿಷಯಗಳನ್ನು ಸರಿಯಾಗಿ ಅನುಷ್ಠಾನ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಭರ್ಮಾ ಗುಡುಂಕೇರಿ, ಸಂಯೋಜಕರು ಸೇವಕ ಬೆಳಗಾವಿ ಮಾತನಾಡಿದರು. ಸೇವಕ ಸಂಸ್ಥೆ ಬೆಳಗಾವಿ ಬೆಳೆದು ಬಂದ ಹಾದಿ, ಮಾಡುತ್ತಿರುವ ಕಾರ್ಯಚಟುವಟಿಕೆಗಳು ಹಾಗೂ ಈ ಕಾರ್ಯಾಗಾರದ ಸಂಪೂರ್ಣ ಮಾಹಿತಿಯನ್ನು ನೀಡಿದರು.

ಈ ಕಾರ್ಯಾಗಾರದಲ್ಲಿ ಅತಿಥಿಗಳಾಗಿ ರಮೇಶ ಯಮನ ಶೆಟ್ಟಿ, ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳು ಆಗಿ ಡಾ. ಪ್ರವೀಣ ಡಿ‌ . ಎಸ್, ವಿನೋದ ರಾವ್ ಮತ್ತು ರಮ್ಯಾ ಎಚ್. ಎಸ್ ಇವರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಸುಮಿತ್ರಾ ಕುಂಬಾರ ನಿರೂಪಿಸಿದರು. ರಮೇಶ ಯಮನಶೆಟ್ಟಿ ಉಪನ್ಯಾಸಕರು ಬಿ.ವಿ.ವಿ. ಶಿಕ್ಷಣ ಮಹಾವಿದ್ಯಾಲಯ ಸ್ವಾಗತಿಸಿದರು. ಆರ್ ಕೆ. ಕುಲಕರ್ಣಿ ವಂದಿಸಿದರು.