ಬೆಳಗಾವಿ :ಕನ್ನಡ ಸಂಸ್ಕೃತಿ, ಭಾರತೀಯ ಸಂಸ್ಕೃತಿ ಹಾಗೂ ಜಾಗತಿಕ ಸಂಸ್ಕೃತಿಗಳ ಹಲವು ಜ್ಞಾನಶಿಸ್ತುಗಳನ್ನು ಆಧರಿಸಿ ಸಂಶೋಧನೆಗಿಳಿದ ಶಂಬಾ ಅವರು ಕನ್ನಡ ಸಂಶೋಧನಾ ಲೋಕಕ್ಕೆ ಬಹುಶಿಸ್ತೀಯ ಅಧ್ಯಯನ ಮಾದರಿಯನ್ನು ನೀಡಿದವರು ಎಂದು ಪ್ರೊ. ಬಸವರಾಜ ಕಲ್ಗುಡಿ ಅಭಿಪ್ರಾಯಪಟ್ಟರು.

ಫೆ. 15 ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಡಾ. ಶಂಬಾ ಜೋಶಿ ಅಧ್ಯಯನ ಪೀಠಗಳ ಸಹಯೋಗದೊಂದಿಗೆ ಡಾ. ಶಂಬಾ ಜೋಶಿ : ಮರುಚಿಂತನೆ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಶಂಬಾ ಅವರು ಕನ್ನಡ ಸಂಶೋಧನಾ ಲೋಕಕ್ಕೆ ಬಹುಶಿಸ್ತೀಯ ಮಾದರಿಯ ಅಧ್ಯಯನ ಕ್ರಮಕ್ಕೆ ಮೇಲ್ಪಂಕ್ತಿಯನ್ನು ಹಾಕಿದವರು. ಅವರ ಕುರಿತು ಅನೇಕ ನೆಲೆಗಳಲ್ಲಿ ಅಧ್ಯಯನಗಳು ನಡೆಯಬೇಕಿದೆ. ಪ್ರಸ್ತುತ ದಿನಗಳಲ್ಲಿ ಅವರ ಅಧ್ಯಯನಗಳ ಪ್ರಸ್ತುತತೆಯ ಅನಿವಾರ್ಯತೆಯ ಕುರಿತು ವಿವರಿಸಿದರು.

ಸಮಾರಂಭವನ್ನು ಉದ್ಘಾಟಿಸಿದ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ. ವಿ. ಪರಮಶಿವಮೂರ್ತಿ ಅವರು, ಮಾನವಿಕ ವಿಜ್ಞಾನಗಳ ಸಂಶೋಧನೆಗೆ ಮೂಲಗಾಮಿ ಚಿಂತನೆಯ ಪರಿಕಲ್ಪನೆಯನ್ನು ಬೆಳಗಾವಿ ಜಿಲ್ಲೆಯವರಾದ ಡಾ. ಶಂಬಾ ಅವರೇ ಮೊದಲು ನಾಡಿಗೆ ನೀಡಿದರು. ಅಂದಿನಿಂದ ಬಹುಶಿಸ್ತೀಯ ಹಾಗೂ ಅಂತರ್‌ಶಿಸ್ತೀಯ ಮಾನವಿಕ ಅಧ್ಯಯನಗಳು ಹೊಸದಾಗಿ ಕಟ್ಟಿಕೊಳ್ಳತೊಡಗಿದವು. ಆ ಕಾರಣಕ್ಕಾಗಿ ಬೆಳಗಾವಿ ಜಿಲ್ಲೆಯ ಸಂಶೋಧನಾ ಪರಂಪರೆಯನ್ನು ಅಭಿನಂದಿಸಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್. ಎಂ. ಗಂಗಾಧರಯ್ಯ ಮಾತನಾಡಿ, ನಾಡಿನ ಶ್ರೇಷ್ಠ ಸಂಸ್ಕೃತಿ ಚಿಂತಕನ ಕುರಿತು ಹೊಸದಾಗಿ ಅಧ್ಯಯನಗಳು ಕಟ್ಟಿಕೊಳ್ಳಬೇಕಾಗಿದೆ. ಡಾ. ಶಂಬಾ ಅವರು ಬೆಳಗಾವಿ ಜಿಲ್ಲೆಯ ತವರಿನವರಾದರೂ ಬೆಳಗಾವಿ ಜಿಲ್ಲೆಯ ಜನತೆಗೆ ಡಾ. ಶಂಬಾ ಅವರ ವಿಚಾರಧಾರೆಗಳು ತಲುಪುವಲ್ಲಿ ಸಫಲವಾಗಿಲ್ಲ , ಈಗ ಆ ಕಾರ್ಯವನ್ನು ಕನ್ನಡ ಅಧ್ಯಯನ ಸಂಸ್ಥೆಯು ಕೈಗೆತ್ತಿಕೊಂಡಿದೆ ಎಂದರು.

ವಿಚಾರ ಸಂಕಿರಣದಲ್ಲಿ ಡಾ. ಶಂಬಾ : ಸ್ಥಳನಾಮಗಳ ಪರಿಕಲ್ಪನೆಯ ಅಧ್ಯಯನಗಳು ಹಾಗೂ ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ ಮತ್ತು ಕನ್ನಡತ್ವದ ಪ್ರಾಚೀನ ಶೋಧಗಳು ಎನ್ನುವ ಪ್ರಬಂಧಗಳು ಮಂಡನೆಯಾದವು. ಡಾ. ಎಸ್. ಎಸ್. ಅಂಗಡಿ, ಡಾ. ಜಿ. ವಿ. ರಾಜಣ್ಣ ಡಾ. ಕೆ. ರಾಮರೆಡ್ಡಿ, ಡಾ. ವಿ. ಎಸ್. ಮಾಳಿ, ಡಾ. ವೈ. ಎಂ. ಯಾಕೊಳ್ಳಿ, ದೀಪಕ ಕೃಷ್ಣ ಆಲೂರು, ಅಧ್ಯಯನ ಪೀಠದ ಸಂಚಾಲಕರಾದ ಪ್ರೊ. ವಿರೂಪಾಕ್ಷಿ ಪೂಜಾರಹಳ್ಳಿ, ಡಾ. ಶೋಭಾ ನಾಯಕ ಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದರು. ಡಾ. ಚಲುವರಾಜು ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಗುಂಡಣ್ಣ ಕಲಬುರ್ಗಿ ಉಪಸ್ಥಿತರಿದ್ದರು. ವಿವಿಧ ಗೋಷ್ಠಿಗಳನ್ನು ಡಾ. ಗಜಾನನ ನಾಯ್ಕ, ಡಾ. ಮಹೇಶ ಗಾಜಪ್ಪನವರ, ಡಾ. ಪಿ. ನಾಗರಾಜ, ಡಾ. ಹನುಮಂತಪ್ಪ ಸಂಜೀವಣ್ಣನವರ ನಡೆಸಿಕೊಟ್ಟರು. ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳ ಅಧ್ಯಾಪಕರುಗಳು, ಸ್ನಾತಕೋತ್ತರ ವಿಭಾಗಗಗಳ ಅಧ್ಯಾಪಕರುಗಳು, ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಜರಿದ್ದರು.