ಬೆಳಗಾವಿ :
ಬೆಳಗಾವಿ ಕೋಟೆ ಆವರಣದ ಶ್ರೀ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಶ್ರೀರಾಮಕೃಷ್ಣ ಪರಮಹಂಸರ ವಿಶ್ವ ಭಾವೈಕ್ಯ ಮಂದಿರ 2004 ರ ಜನವರಿಯಲ್ಲಿ ಉದ್ಘಾಟನೆಗೊಂಡಿದೆ. ಇದರ ಸವಿನೆನಪಿಗಾಗಿ ಫೆಬ್ರವರಿ 16 ರಿಂದ 18 ರವರೆಗೆ ಮೂರು ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮ ಪ್ರಾಣಾನಂದ ತಿಳಿಸಿದ್ದಾರೆ.

ಫೆಬ್ರವರಿ 16 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1:45 ರವರೆಗೆ ಯುವ ಸಮ್ಮೇಳನ ನಡೆಯಲಿದೆ. ಆಧುನಿಕ ಯುವಕರಿಗೆ ಸ್ವಾಮಿ ವಿವೇಕಾನಂದರ ವಿಚಾರಗಳು ವಿಷಯವಾಗಿ ಗುಜರಾತ್ ರಾಜ್ ಕೋಟ್ ಶ್ರೀರಾಮಕೃಷ್ಣ ಮಿಷನ್ ಆಶ್ರಮದ ಸ್ವಾಮಿ ನಿಖಿಲೇಶ್ವರನಂದಜೀ ಮಹಾರಾಜ್, ಸ್ವಾಮಿ ವಿವೇಕಾನಂದರ ಮೂರು ಮಂತ್ರಗಳು: ಏಕಾಗ್ರತೆ, ಆತ್ಮವಿಶ್ವಾಸ, ಚಾರಿತ್ರ್ಯ ವಿಷಯವಾಗಿ ಬೆಂಗಳೂರು ರಾಮಕೃಷ್ಣ ಮಠದ ಸ್ವಾಮಿ ವೀರೇಶನಂದಜೀ ಮಹಾರಾಜ್ ಮತ್ತು ಸ್ವಾಮಿ ವಿವೇಕಾನಂದರ ರಾಷ್ಟ್ರಪ್ರೇಮದ ಚಿಂತನೆಗಳ ಅವಶ್ಯಕತೆ ವಿಷಯವಾಗಿ ಮಂಡ್ಯ ವಿವೇಕ ವಿದ್ಯಾ ವಾಹಿನಿ ಟ್ರಸ್ಟ್‌ನ ಸಂಸ್ಥಾಪಕ ಮತ್ತು ಖ್ಯಾತ ವಾಗ್ಮಿ ನಿತ್ಯಾನಂದ ವಿವೇಕವಂಶಿ ಮಾತನಾಡಲಿದ್ದಾರೆ.

ಫೆಬ್ರವರಿ 17 ರಂದು ಶಿಕ್ಷಕರ ಸಮ್ಮೇಳನ ಏರ್ಪಡಿಸಲಾಗಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 1:45 ರವರೆಗೆ ನಡೆಯುವ ಸಮ್ಮೇಳನದಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ವಿಷಯವಾಗಿ ಗುಜರಾತ್
ರಾಜ್ ಕೋಟ್ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ನಿಖಿಲೇಶ್ವರಾನಂದಜೀ ಮಹಾರಾಜ್ ಮಾತನಾಡುವರು. ಕಲಿಕೆಯೆಂಬ ಸಂತಸದ ಸಾಹಸ ವಿಷಯವಾಗಿ ಬೆಂಗಳೂರು ರಾಮಕೃಷ್ಣ ಮಠದ ಸ್ವಾಮಿ ವೀರೇಶ್ವರನಂದಜೀ ಮಹಾರಾಜ್ ಮತ್ತು ಸ್ವಾಮಿ ವಿವೇಕಾನಂದರ ಶೈಕ್ಷಣಿಕ ಚಿಂತನೆಗಳು ವಿಷಯವಾಗಿ ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ
ಡಾ.ಎಚ್.ಎನ್.ಮುರಳೀಧರ ಮಾತನಾಡುವರು.

ಫೆಬ್ರವರಿ 18 ರಂದು ಆಧ್ಯಾತ್ಮಿಕ ಸಮ್ಮೇಳನ ನಡೆಯಲಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರ ವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಆಧುನಿಕ ಮನುಷ್ಯ ಶಾಂತಿಯ ಹುಡುಕಾಟದಲ್ಲಿ ವಿಷಯವಾಗಿ ಗುಜರಾತ್ ರಾಜ್ ಕೋಟ್ ರಾಮಕೃಷ್ಣ ಆಶ್ರಮದ ಸ್ವಾಮಿ ನಿಖಿಲೇಶ್ವರನಂದಜೀ ಮಹಾರಾಜ್, ಶ್ರೀ ರಾಮಕೃಷ್ಣರ ನಾಲ್ಕು ಮಹಾನ್ ವಾಕ್ಯಗಳು ವಿಷಯವಾಗಿ ಬೆಂಗಳೂರು ರಾಮಕೃಷ್ಣ ಮಠದ ಸ್ವಾಮಿ ವೀರೇಶ್ವರನಂದಜೀ ಮಹಾರಾಜ್ ಮತ್ತು ದಿವ್ಯತ್ರಯರ ಭಾವ ಸಂಗಮ ವಿಷಯವಾಗಿ ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ
ಡಾ.ಎಚ್.ಎನ್.ಮುರಳೀಧರ ಮಾತನಾಡುವರು. ಅಂದು ಸಂಜೆ 6-8 ರವರೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಗೀತ ರಾಮಾಯಣ ನಡೆಯಲಿದೆ. ದತ್ತಾ ಚಿತ್ತಲೆ ಹಾಗೂ ಸಂಗಡಿಗರು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.