ಮಲೆನಾಡ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಸಿಗಂದೂರು ಚೌಡೇಶ್ವರಿ ದೇವಾಲಯವು ಕರ್ನಾಟಕದ ಸಾಗರ ತಾಲ್ಲೂಕಿನಲ್ಲಿರುವ ಒಂದು ವಿಶಿಷ್ಟ ದೇವಾಲಯವಾಗಿದೆ. ಈ ದೇವಾಲಯವು ಸಿಗಂದೂರು ಚೌಡೇಶ್ವರಿ ಎಂದೂ ಕರೆಯಲ್ಪಡುವ ಚೌಡೇಶ್ವರಿ ದೇವಿಯ ನೆಲೆಯಾಗಿದೆ. ಇಲ್ಲಿನ ತಾಯಿಯನ್ನು ತುಂಬಾ ಶಕ್ತಿಶಾಲಿ ದೇವಿ ಎಂದೇ ನಂಬಲಾಗುತ್ತದೆ. ದೇವಿಯ ಹೆಸರಿನಲ್ಲಿ ನಿತ್ಯ ವಿಶೇಷ ಪೂಜೆಗಳನ್ನ ಸಲ್ಲಿಸಲಾಗುತ್ತದೆ. ಮಕರ ಸಂಕ್ರಾಂತಿ ದಿನದಂದು ವಾರ್ಷಿಕ ಉತ್ಸವವನ್ನು (ಜಾತ್ರೆ) ನಡೆಸಲಾಗುತ್ತದೆ, ಸಾವಿರಾರು ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಸಿಗಂದೂರು ಚೌಡೇಶ್ವರಿ ಕಳ್ಳರನ್ನು ಶಿಕ್ಷಿಸುವ ತಾಯಿ ಎಂದು ಭಕ್ತರು ನಂಬುತ್ತಾರೆ. ಬೆಲೆಬಾಳುವ ವಸ್ತುಗಳನ್ನ ಕಳೆದುಕೊಂಡ ಜ ಆಗಾಗ್ಗೆ ಇಲ್ಲಿಗೆ ಬಂದು ದೇವಿಯಲ್ಲಿ ಪ್ರಾರ್ಥನೆ ಮಾಡುತ್ತಾರೆ. ಅವರ ಕೋರಿಕೆಯಂತೆ ಹಲವಾರು ವಿಶೇಷ ಘಟನೆ ನಡೆದ ಉದಾಹರಣೆಗಳು ಇದೆ. ಪವಿತ್ರ ಕ್ಷೇತ್ರ ಎನಿಸಿರುವ ಈ ದೇವಾಲಯವು ಮೂರು ಬದಿಗಳಲ್ಲಿ ಲಿಂಗನಮಕ್ಕಿ ಜಲಾಶಯದ ಶರಾವತಿ ನದಿಯ ಹಿನ್ನೀರು ಆವರಿಸಿದೆ.
ಸಾಗರ:
ಮಲೆನಾಡಿನ ವನದೇವತೆಯಾದ ಸಿಗಂದೂರು ಚೌಡಮ್ಮ ದೇವಿ ನಾಡಿನ ಜನರನ್ನು ಪೊರೆಯುವ ಆರಾಧ್ಯ ದೇವಿಯಾಗಿದ್ದಾಳೆ. ಧರ್ಮ ರಕ್ಷಣೆಯೊಂದಿಗೆ ನಾಡಿನ ಶ್ರೇಯಸ್ಸಿಗೆ ದೇವಿಯ ಆಶೀರ್ವಾದ ಇರುತ್ತದೆ ಎಂದು ಕೇರಳದ ಶಿವಗಿರಿಯ ನಾರಾಯಣ ಗುರು ಪೀಠದ ಪೀಠಾಧಿಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.
ಸಿಗಂದೂರಿನಲ್ಲಿ ಭಾನುವಾರ ಆರಂಭವಾಗಿರುವ ಸಿಗಂದೂರು ಜಾತ್ರೆಗೆ ಧರ್ಮಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದ ಅವರು, ಹಿಂದುಳಿದ ವರ್ಗಗಳಿಗೆ ಸ್ವಾಭಿಮಾನ ನೀಡಿದ್ದ ಸಂತ ನಾರಾಯಣಗುರುಗಳು ಜಗತ್ತಿಗೆ ಮಾದರಿಯಾದರು. ಬುದ್ದ ಬಸವ, ಗಾಂಧಿ ಮತ್ತು ನಾರಾಯಣಗುರುಗಳ ತತ್ವಗಳು ಇಂದಿಗೂ ಮನುಕುಲಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.
ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿ, ಸಿಗಂದೂರು ಚೌಡೇಶ್ವರಿ ದೇವಾಲಯ ಇಂದು ರಾಜ್ಯದಲ್ಲಿ ಪ್ರಸಿದ್ದಿಯಾಗಿದೆ. ತಾಯಿಯ ಆಶೀರ್ವಾದ ಪಡೆಯಲು ಬರುವ ಭಕ್ತರಿಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲಾಗಿದೆ. ಸರ್ಕಾರ ಮುಂದಿನ ದಿನಗಳಲ್ಲಿ ದೇವಾಲಯಕ್ಕೆ ಬೇಕಿರುವ ಅಗತ್ಯ ಸೌಲಭ್ಯ ಕೊಡಲಿದೆ. ಶ್ರೀಕ್ಷೇತ್ರದ ಮಹಿಮೆ ಅಪಾರವಾಗಿದೆ. ಸಿಗಂದೂರು ಆಡಳಿತದಲ್ಲಿ ನಮ್ಮ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.
ಕೇರಳ ವರ್ಕಲ್ ಮಠದ ಸತ್ಯಾನಂದ ಸ್ವಾಮೀಜಿ ಮಾತನಾಡಿ, ಉತ್ತರಾಯಣ ಪುಣ್ಯಕಾಲದಲ್ಲಿ ದೇವಿಯ ಜಾತ್ರೆ ನಡೆಯುತ್ತಿದ್ದು, ಎಲ್ಲರಿಗೂ ಸನ್ಮಂಗಳ ಉಂಟುಮಾಡಲಿ ಎಂದು ಹೇಳಿದರು.
ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ ತಿಮ್ಮೇಗೌಡ ಮಾತನಾಡಿ, ಸಮಾಜದ ಆಡಳಿತ ಮಂಡಳಿಯಿರುವ ಈ ದೇವಾಲಯದ ಅಭಿವೃದ್ಧಿ ಮತ್ತು ರಕ್ಷಣೆಯ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಮಳಲಿಮಠದ ಡಾ.ನಾಗಭೂಷಣ್ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗುರುವಿನಲ್ಲಿ ಶ್ರದ್ಧೆ ದೇವರಲ್ಲಿ ಭಕ್ತಿ ಇದ್ದರೆ ಸಾಧನೆ ಮಾಡಬಹುದು. ರಾಮಪ್ಪನವರ ಶ್ರಮ, ತಾಳ್ಮೆ ಸಿಗಂದೂರು ಕ್ಷೇತ್ರ ಇಷ್ಟು ದೊಡ್ಡದಾಗಿ ಬೆಳೆಯಲು ಕಾರಣವಾಗಿದೆ ಎಂದು ಹೇಳಿದರು.
ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಧರ್ಮದರ್ಶಿ ಡಾ. ಎಸ್.ರಾಮಪ್ಪನವರು ಮಾತನಾಡಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್, ಪ್ರಮುಖರಾದ ಮಲ್ಲಿಕಾರ್ಜುನ ಹಕ್ರೆ, ಸೂರಜ್ ನಾಯ್ಕ್, ಸೈದಪ್ಪ ಗುತ್ತೇದಾರ್, ತುಮರಿ ಗ್ರಾಮಪಂಚಾಯ್ತಿ ಅಧ್ಯಕ್ಷೆ ಶ್ರೀದೇವಿ ರಾಮಚಂದ್ರ, ದೇವಾಲಯದ ಪ್ರಧಾನ ಕಾರ್ಯದರ್ಶಿ ಎಚ್.ಆರ್. ರವಿಕುಮಾರ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.
ವಿವಿಧ ಜಾನಪದ ಕಲಾ ತಂಡಗಳ ಆಕರ್ಷಕ ನೃತ್ಯದಿಂದ ಜಾತ್ರೆಗೆ ಸಾಂಸ್ಕೃತಿಕ ಮೆರಗು ಬಂದಿತ್ತು. ದೇವಿಯ ಮೂಲ ಸ್ಥಾನದಿಂದ ಜ್ಯೋತಿಯನ್ನು ಮೆರವಣಿಗೆ ಮೂಲಕ ಸಿಗಂದೂರು ದೇವಾಲಯಕ್ಕೆ ಕರೆತರಲಾಯಿತು. ವಿವಿಧ ಪೂಜಾ ವಿಧಿವಿಧಾನಗಳು ನಡೆದವು. ಸಂಜೆ ದೇಗುಲದಲ್ಲಿ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು.