ಬಳ್ಳಾರಿ :
ಆದಾಯ ಮೀರಿ ಆಸ್ತಿಗಳಿಕೆ ಆರೋಪ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ
ಮನೆ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಜಾರಿ ನಿರ್ದೇಶನಾಲಯದ 20 ಅಧಿಕಾರಿಗಳ ನಾಲ್ಕು ತಂಡ ಇಂದು (ಫೆ.10) ಬೆಳಗ್ಗೆ 6.30ಕ್ಕೆ ಏಕಕಾಲಕ್ಕೆ ಶಾಸಕ ನಾರಾಭರತ ರೆಡ್ಡಿ ಮನೆ, ತಂದೆಯ ಕಚೇರಿ, ಚಿಕ್ಕಪ್ಪ ಪ್ರತಾಪ ರೆಡ್ಡಿ ಮನೆ ಮತ್ತು ಕಚೇರಿಯ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾವೆ. ಶಾಸಕ ನಾರಾಭರತ್ ರೆಡ್ಡಿ ಕುಟುಂಬ ಗ್ರಾನೈಟ್ ಬಿಸಿನೆಸ್ ಮಾಡುತ್ತಿದೆ.
ಭರತ್ ರೆಡ್ಡಿ ಅವರ ತಂದೆ, ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ, ಚಿಕ್ಕಪ್ಪ ಪ್ರತಾಪ ರೆಡ್ಡಿ ಮತ್ತು ಸಂಬಂಧಿಗಳ ಮನೆಗಳು, ಕಚೇರಿಗಳಲ್ಲೂ ಶೋಧ ನಡೆಯುತ್ತಿದೆ. ಬೆಂಗಳೂರು, ಚೆನ್ನೈನಲ್ಲಿರುವ ಕಚೇರಿಗಳ ಮೇಲೂ ದಾಳಿ ನಡೆದಿದೆ ಎಂದು ಹೇಳಲಾಗಿದೆ.
ಕೊಪ್ಪಳ ಜಿಲ್ಲೆಯ ಕುಕನೂರು, ಆಂಧ್ರ ಪ್ರದೇಶದ ಒಂಗೋಲ್ಗಳಲ್ಲಿ ಕ್ವಾರಿಗಳನ್ನು ಹೊಂದಿದೆ.
ಇ.ಡಿ ಅಧಿಕಾರಿಗಳ ತಂಡ ಬೆಂಗಳೂರಿನಿಂದ ಆಗಮಿಸಿದ್ದು, ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೆ ದಾಳಿ ನಡೆಸಿದೆ ಎಂದು ಗೊತ್ತಾಗಿದೆ.
ಕೆಲ ವರ್ಷಗಳ ಹಿಂದೆ ಭರತ್ ರೆಡ್ಡಿ ಅವರ ಮನೆ, ಕಚೇರಿ ಮೇಲೆ ಐ.ಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅವರು ಉಚಿತ ಕುಕ್ಕರ್ಗಳನ್ನು ಹಂಚಿದ್ದರು.