ಮೂಡಲಗಿ:
ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಭವ್ಯ ಮಂದಿರ ನಿರ್ಮಾಣಕ್ಕಾಗಿ 500 ವರ್ಷಗಳಿಂದ ಹಿಂದೂ ಸಮಾಜದ ಹೋರಾಟ ತಾರ್ಕಿಕ ಅಂತ್ಯ ಕಂಡು ಜನವರಿ 22 ರಂದು ಲೋಕಾರ್ಪಣೆಗೊಳ್ಳುವ ಮೂಲಕ ಭಾರತೀಯ ಸನಾತನ ಸಂಸ್ಕೃತಿ ಪರಂಪರಯನ್ನು ಪುನರುತ್ಥಾನಗೊಳಿಸಲಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಗುರುವಾರ ಜ-04 ರಂದು ತಾಲೂಕಿನ ಹುಣಶ್ಯಾಳ ಪಿ.ಜಿ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದೂಗಳ ಆರಾಧ್ಯ ದೇವ ಪ್ರಭು ಶ್ರೀರಾಮ ಮಂದಿರ ನಿರ್ಮಾಣ, ಕಾಶಿ ವಿಶ್ವನಾಥ ಮಂದಿರ, ಉಜ್ಜಯನಿಯ ಮಹಾಕಾಳೇಶ್ವರ ಮಂದಿರ, ಕೇದಾರಿನಾಥ, ಬದ್ರಿನಾಥ ದೇವಸ್ಥಾನದ ಅಭಿವೃದ್ಧಿ ಮಾಡುವ ಮೂಲಕ ಭಾರತೀಯರು ಹೆಮ್ಮೆ ಪಡುವ ಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಮಾಡಿದೆ ಎಂದರು.

ಹೀಗಾಗಿ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ನೆರವೇರಲಿದೆ. ಈ ಸಂದರ್ಭದಲ್ಲಿ ತಮ್ಮ ಗ್ರಾಮಗಳಲ್ಲಿ ದೇವಸ್ಥಾನಗಳಲ್ಲಿ ಪೂಜಾ ಕಾರ್ಯ ನೇರವೇರಿಸುವ ಮೂಲಕ ಮತ್ತು ಅದೇ ದಿನ ತಮ್ಮ ಮನೆಯಲ್ಲಿ ದೀಪ ಬೆಳಗಿಸುವ ಮೂಲಕ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬೇಕೆಂದು ಮನವಿ ಮಾಡಿಕೊಂಡರು.

ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಸಮ್ಮಾನ್ ಯೋಜನೆ, ಕಿಸಾನ್ ಮಾನ್ ಧನ್ ಯೋಜನೆ, ಫಸಲ್ ಬಿಮಾ ಯೋಜನೆ, ಕೃಷಿ ಸಿಂಚಾಯಿ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ, ರಸಗೊಬ್ಬರ ಸಬ್ಸಿಡಿ, ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ, ಉಜ್ವಲಾ ಯೋಜನೆ, ಆಯುಷ್‌ಮಾನ್ ಕಾರ್ಡ್ ವಿತರಣೆ, ಜಲ ಜೀವನ್ ಮಿಷನ್, ಪಿಎಂ ಮುದ್ರಾ ಯೋಜನೆ, ಪಿಎಂ ಜೀವನ್ ಜ್ಯೋತಿ, ಪಿಎಂ ಸುರಕ್ಷಾ ಭೀಮಾ ಯೋಜನೆ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಇವುಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಡಬ್ಬನ್ನವರ, ಉಪಾಧ್ಯಕ್ಷೆ ಕಸ್ತೂರಿ ಇಂಚಲ, ಗ್ರಾ.ಪಂ ಸರ್ವ ಸದಸ್ಯರು, ಪ್ರಮುಖರಾದ ಚಂದ್ರಗೌಡ ಪಾಟೀಲ, ಸಿದ್ದಾರ್ಥ ಅಥಣಿ, ಮಹಾಂತೇಶ ರೊಡ್ಡನ್ನವರ, ಸಿದ್ದಾರೂಢ ಇಂಚಲ, ಶಂಕರ ಗಡ್ಡಿ, ದೇವೆಂದ್ರ ಹುಕ್ಕೇರಿ, ಬಸಲಿಂಗ ಸೋಮನಟ್ಟಿ, ಅಜಿತ ಪಾಟೀಲ, ತುಕಾರಾಮ ಬಂಗೇರ, ಬಸವರಾಜ ಕರೆಬನ್ನಿ, ಕೆನರಾ ಬ್ಯಾಂಕ್ ಮ್ಯಾನೇಜರ್‌ ಎಸ್. ಕೃಷ್ಣಾರೆಡ್ಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವಾನಂದ ಗುಡಸಿ, ತುಕ್ಕಾನಟ್ಟಿ ಕೆವಿಕೆ ಸಿಬ್ಬಂದಿ ರೇಖಾ ಸೇರಿದಂತೆ ಸ್ಥಳೀಯ ಮುಖಂಡರು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.