ಶಿವಮೊಗ್ಗ :
2018ರ ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದು ಮಾಜಿ ಸಚಿವ ಕೆಎಸ್​ ಈಶ್ವರಪ್ಪ ಅವರು ಹುಟ್ಟು ಹಾಕಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್​. ಈ ರಾಯಣ್ಣ ಬ್ರಿಗೇಡ್​ ರಾಜ ಬಿಜೆಪಿಗೆ ಮಗ್ಗಲು ಮುಳ್ಳಾಗಿತ್ತು. ಇದೀಗ ಕೆಎಸ್​ ಈಶ್ವರಪ್ಪ ಮತ್ತೆ ರಾಯಣ್ಣ ಬ್ರಿಗೇಡ್​ ಆರಂಭಿಸಲು ಮುಂದಾಗಿದ್ದಾರೆ.

ಹಿಂದುಳಿದವರಿಗೆ, ಅತಿ ಹಿಂದುಳಿದವರಿಗೆ ನ್ಯಾಯ ಸಿಗಬೇಕು ಅಂತ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಪ್ರಾರಂಭಿಸಿದ್ದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಲ್ಲಿಸಬೇಕು ಅಂತ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದರು. ಮರು ಮಾತನಾಡದೆ ನಿಲ್ಲಿಸಿದೆ. ಆ ಸಂಘಟನೆ ಈಗ ಇದ್ದಿದ್ದರೆ ಹಿಂದುಳಿದವರಿಗೆ ನ್ಯಾಯ ಸಿಗುತ್ತಿತ್ತೇನೋ. ನಾನು ಯಾವಾಗಲೂ ಹಿರಿಯರ ಮಾತು‌ ಮೀರಿರಲಿಲ್ಲ, ಹೀಗಾಗಿ ಕೈಬಿಟ್ಟೆ. ನಾನು ಆವಾಗಲೇ ಅವರ ಮಾತು ಮೀರಿದ್ದರೆ ಸರಿ ಹೋಗುತಿತ್ತು. ಚುನಾವಣೆ ಮುಗಿದ ನಂತರ ಹಿಂದುಳಿದವರ, ದಲಿತರ ರಾಜ್ಯ ಮಟ್ಟದ ಸಭೆ ಕರೆಯುತ್ತೇನೆ ಎಂದು ಮಾಜಿ ಸಚಿವ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆಎಸ್ ಈಶ್ವರಪ್ಪ ಹೇಳಿದರು. ಹೀಗೆ ಹೇಳುವ ಮೂಲಕ ಕೆಎಸ್​ ಈಶ್ವರಪ್ಪ ಅವರು ಮತ್ತೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್​ ಆರಂಭಿಸುವ ಸುಳಿವು ನೀಡಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದುಳಿದವರಿಗೆ, ದಲಿತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ. ಬಿಜೆಪಿ ನನ್ನ ಮಾತೃ ಸಂಸ್ಥೆ, ಈ ಚುನಾವಣೆಯಲ್ಲಿ ಗೆದ್ದು ಮತ್ತೆ ಬಿಜೆಪಿಗೆ ಹೋಗುತ್ತೇನೆ. ಕ್ಷೇತ್ರದಲ್ಲಿ ನನಗೆ ದಿನದಿಂದ ದಿನಕ್ಕೆ ಬೆಂಬಲ ಹೆಚ್ಚಾಗುತ್ತಿದೆ. ಜನ ನಿರೀಕ್ಷೆಗೆ ಮೀರಿ ಬೆಂಬಲ ಕೊಡುತ್ತಿದ್ದಾರೆ ಎಂದು ತಿಳಿಸಿದರು.

ಬಗರ್ ಹುಕಂ ಜಮೀನು ಸಮಸ್ಯೆ ಇನ್ನೂ ಹಾಗೆ ಇದೆ. ಸಾವಿರಾರು ಸಂತ್ರಸ್ತರಿಗೆ ಈವರೆಗೂ ಹಕ್ಕುಪತ್ರ ಸಿಕ್ಕಿಲ್ಲ. ಮಲೆನಾಡು ರೈತ ಹೋರಾಟ ಸಮಿತಿ ನನಗೆ ಬೆಂಬಲ ನೀಡಿದೆ. ಇವರ ಹೋರಾಟಕ್ಕೆ ನಾನು ಸಹ ಸಾಥ್ ನೀಡುತ್ತೇನೆ. ಚುನಾವಣೆ ಬಳಿಕವೂ ನನ್ನ ಹೋರಾಟ ಮುಂದುವರಿಯುತ್ತದೆ. ಚುನಾವಣೆ ಬಳಿಕ ರಾಜ್ಯಮಟ್ಟದ ಸಭೆ ಮಾಡುತ್ತೇನೆ ಎಂದರು.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್​
ಪಕ್ಷ ರಾಜಕಾರಣದಲ್ಲಿ ಅವರ ಅಸ್ತಿತ್ವ ಅಲುಗಾಡಿದಾಗ, ಬಿಜೆಪಿಗೆ ಹಿಂದುಳಿದ ವರ್ಗಗಳ ನಾಯಕರೊಬ್ಬರ ಅಗತ್ಯ ಉದ್ಭವಿಸಿದಾಗ, ಕಾಂಗ್ರೆಸ್​ನ ಹಿಂದುಳಿದ ವರ್ಗಗಳ, ಮುಖ್ಯವಾಗಿ ಕುರುಬ ಸಮುದಾಯದ ಸಿದ್ದರಾಮಯ್ಯನವರಿಗೆ ಪರ್ಯಾಯ ನಾಯಕತ್ವಕ್ಕಾಗಿ ಈಶ್ವರಪ್ಪ ಕಂಡುಕೊಂಡ ದಾರಿ ರಾಯಣ್ಣ ಬ್ರಿಗೇಡ್. 2016ರ ಡಿಸೆಂಬರ್​ನಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿ ಮಾಜಿ ಸಚಿವ ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್​ ಆರಂಭಿಸಿದರು. 2018ರ ವಿಧಾನಸಭೆ ಚುನಾವಣೆಗೂ ಮುಂಚೆ ರಾಯಣ್ಣ ಬ್ರಿಗೇಡ್​ ಆಂಭವಾಗಿದ್ದು, ಬಿಜೆಪಿಗೆ ಮಗ್ಗಲು ಮುಳ್ಳಾಗಿತ್ತು.

ಈಗ ಮತ್ತೆ ಈಶ್ವರಪ್ಪನವರ ರಾಜಕೀಯ ಭವಿಷ್ಯ ಡೋಲಾಯಮಾನವಾಗಿರುವ ಸಂದರ್ಭದಲ್ಲಿ ಮತ್ತೆ ರಾಯಣ್ಣನ ಮೊರೆ ಹೋಗಿದ್ದಾರೆ. ಹೀಗಾಗಿ ಈಶ್ವರಪ್ಪ ಅವರು ರಾಯಣ್ಣ ಬ್ರಿಗೇಡ್​ಗೆ ಮರುಜೀವ ನೀಡಲು ಯತ್ನಿಸುತ್ತಿದ್ದಾರೆ.