ಬೆಳಗಾವಿ:
ಭಾರತೀಯ ಜನತಾ ಪಾರ್ಟಿ ಸಂಸ್ಕಾರ ಮತ್ತು ಸನಾತನ ಸಂಸ್ಕೃತಿಯನ್ನು ಹೊಂದಿದ್ದು ರಾಷ್ಟ್ರೀಯತೆ ಮತ್ತು ಹಿಂದುತ್ವವನ್ನು ಮೈಗೂಡಿಸಿಕೊಂಡು ಯುವಕರಿಗೆ ಸದಾ ಆದ್ಯತೆ ನೀಡುವ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಸುಭಾಷ ಪಾಟೀಲರ ಮುಂದಾಳತ್ವದಲ್ಲಿ ಬಿಜೆಪಿ ಇನ್ನಷ್ಟು ಬಲಿಷ್ಠವಾಗಿಸುವ ಶಪಥ ಮಾಡೊಣ ಎಂದು ಜಿಲ್ಲಾ ಬಿಜೆಪಿ ಖಂಜಾಚಿ ಮಲ್ಲಿಕಾರ್ಜುನ ‌ಮಾದಮ್ಮನವರ ಹೇಳಿದರು.

ಮಾರಿಹಾಳ ಗ್ರಾಮದ ಕೊಡಿ ಬಸವೇಶ್ವರ ದೇವಸ್ಥಾನದಲ್ಲಿ ನೂತನ ಜಿಲ್ಲಾಧ್ಯಕ್ಷರ ಸತ್ಕಾರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳಗಾವಿ ಗ್ರಾಮಾಂತರ ಜಿಲ್ಲೆಯ 8ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅತ್ಯಂತ ಬಲಿಷ್ಠವಾಗಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕೂದಲೆಳೆಯ ಅಂತರದಲ್ಲಿ 2ವಿಧಾನಸಭಾ ಸ್ಥಾನ ಕಳೆದುಕೊಂಡೆವು. ಆದರೆ ಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಜಿಲ್ಲೆಯ ಜವಾಬ್ದಾರಿ ಹೊತ್ತಿರುವ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಅತ್ಯಧಿಕ‌ ಮತಗಳಿಂದ ಗೆಲವು ತಂದು ಕೊಡುವತ್ತ ಪರಿಶ್ರಮಿಸೋಣ. ಬೂತ್ ಮಟ್ಟದ ಕಾರ್ಯಕರ್ತರಾಗಿ ಮಂಡಲ, ಜಿಲ್ಲೆಯ ವಿವಿಧ ಪದಾಧಿಕಾರಿಗಳಾಗಿ ಪಕ್ಷಕ್ಕೆ ಸೇವೆ ಸಲ್ಲಿಸಿದ ಸುಭಾಷ ಪಾಟೀಲರು ಒಬ್ಬ ರೈತನ ಮಗನಾಗಿ ಜಿಲ್ಲೆಯ ಅಧ್ಯಕ್ಷರಾಗಿದ್ದಾರೆ. ಅವರಿಗೆ ಜಿಲ್ಲೆಯಲ್ಲಿ ಸಂಪೂರ್ಣ ಸಹಕಾರ ನೀಡುವದಾಗಿ ಭರವಸೆ ನೀಡಿದರು.

ಪ್ರಾಸ್ತಾವಿಕವಾಗಿ ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಒಬ್ಬ ಸಾಮಾನ್ಯ ಕಾರ್ಯಕರ್ತನಿಗೂ ಪಕ್ಷದ ಜವಾಬ್ದಾರಿ ಮತ್ತು ಚುನಾಯಿತ ಪ್ರತಿನಿಧಿಯಾಗಲು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಬೇರೆ ಪಕ್ಷದಲ್ಲಿ ಒಮ್ಮೆ ನೇಮಕವಾದರೆ ಬದಲಾವಣೆ ಕಷ್ಟ ಸಾಧ್ಯ. ಆದರೆ ಬಿಜೆಪಿಯಲ್ಲಿ ಕಡ್ಡಾಯವಾಗಿ 3 ವರ್ಷಗಳ ನಂತರ ಬೂತ್ ಮಟ್ಟದಿಂದ ರಾಷ್ಟ್ರೀಯ ಅಧ್ಯಕ್ಷರವರೆಗೆ ಬದಲಾವಣೆ ಮಾಡುವದರೊಂದಿಗೆ ಸರ್ವರಿಗೂ ಸಮಪಾಲು ಸಮಬಾಳು ಎನ್ನುವಂತೆ ಸರ್ವ ಜನಾಂಗವನ್ನು ಪ್ರೀತಿಸುತ್ತಾ ಜೊತೆ ಜೊತೆಯಲ್ಲಿ ಕರೆದುಕೊಂಡು ಹೋಗುವ ಪಕ್ಷ ಬಿಜೆಪಿ ಭರವಸೆಯ ನಾಯಕ ಸುಭಾಷ ಪಾಟೀಲರ ಅಧ್ಯಕ್ಷತೆಯಲ್ಲಿ ಪಕ್ಷ ಎತ್ತರಕ್ಕೆ ಬೆಳೆಯಲೆಂದು ಶುಭ ಹಾರೈಸಿದರು.

ಸತ್ಕಾರ ಸ್ವೀಕರಿಸಿದ ನೂತನ ಜಿಲ್ಲಾ‌ ಅಧ್ಯಕ್ಷ ಸುಭಾಷ ಪಾಟೀಲ ಮಾತನಾಡಿ, ನನ್ನ ಮೇಲೆ‌ ವಿಶ್ವಾಸವವಿಟ್ಟು ಜವಾಬ್ದಾರಿ ನೀಡಿದ ಪಕ್ಷದ ಮುಖಂಡರ ವಿಶ್ವಾಸಕ್ಕೆ ಎಲ್ಲಿಯೂ ಚ್ಯುತಿ ಬಾರದಂತೆ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಎಲ್ಲರ ವಿಶ್ವಾಸದೊಂದಿಗೆ ಜಿಲ್ಲೆಯಲ್ಲಿರುವ ಎಲ್ಲ ಗ್ರಾಮಗಳಿಗೂ ಸಂಚರಿಸಿ ಪಕ್ಷ ಸಂಘಟಿಸುತ್ತೇನೆ. ಗ್ರಾಮಸ್ಥರ ಸಹಾಯ ಸಹಕಾರ ವಿಶ್ವಾಸ ಸದಾ ಪಕ್ಷದ ಮೇಲೆ ಇರಲಿ ಎಂದು ಹೇಳಿದರು.

ಜಿಲ್ಲಾ ಎಸ್ಸಿ‌ ಮೋರ್ಚಾ ಅಧ್ಯಕ್ಷ ಯಲ್ಲೇಶ ಕೋಲಕಾರ, ಬಸವರಾಜ ಮಾದಮ್ಮನವರ, ವೀರಭದ್ರ ಪೂಜಾರ, ಶಿವಾನಂದ ಹಿತ್ತಲಮನಿ,
ಫಕೀರಪ್ಪ ತಳವಾರ, ಸಿದ್ದಯ್ಯ ಪುಜಾರ, ಈರಯ್ಯ ಅಲಯ್ಯನವರಮಠ, ಸುರೇಶ ಮಲ್ಲಣ್ಣವರ, ಪ್ರಕಾಶ ಯಲ್ಲಪ್ಪನವರ, ಮಂಜುನಾಥ ಹನ್ನಪ್ಪನವರ, ಸಂಭಾಜಿ ಜಾನಕಿ, ಪತ್ರಪ್ಪ ಹಿತ್ತಲಮನಿ, ಮುಂತಾದವರು ಇದ್ದರು.