ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರ ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರು ವಿಧಾನಸಭಾ ಮತಕ್ಷೇತ್ರಗಳನ್ನು ಒಳಗೊಂಡಿದೆ. ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಡಾ. ಅಂಜಲಿ ನಿಂಬಾಳ್ಕರ್ ಲೋಕಸಭೆಗೆ ಹೋಗಲು ಮುಂದಾಗಿದ್ದಾರೆ. ಈ ಮೂಲಕ ವರ್ಷದ ಅವಧಿಯಲ್ಲಿಯೇ ಮತ್ತೊಂದು ಚುನಾವಣೆಗೆ ಹೋಗಲು ತುರುಸಿನ ತಯಾರಿ ನಡೆಸಿದ್ದಾರೆ. ಇನ್ನೊಂದೆಡೆ ಕಾರವಾರದ ಮಾಜಿ ಶಾಸಕಿ ರೂಪಾಲಿ ನಾಯಕ ಅವರು ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಳ್ಳಲು ಬಿರುಸಿನ ತಯಾರಿ ನಡೆಸಿದ್ದಾರೆ. ಒಟ್ಟಾರೆ, ಎರಡು ಪಕ್ಷಗಳು ಈ ಮತಕ್ಷೇತ್ರದಿಂದ ಮಹಿಳೆಯರ ಸ್ಪರ್ಧೆಗೆ ಅನುವು ಮಾಡಿಕೊಡುತ್ತದಾ ನೋಡಬೇಕು.

ಬೆಳಗಾವಿ :
ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರದಿಂದ ಸ್ಪರ್ಧೆಗಿಳಿಯಲು ಖಾನಾಪುರದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಉತ್ಸುಕತೆ ತೋರಿಸಿದ್ದಾರೆ. ಈ ಮೂಲಕ ಕಳೆದ ಕೆಲ ದಶಕಗಳಿಂದ ಕಳೆದುಕೊಂಡಿರುವ ಈ ಪ್ರತಿಷ್ಠಿತ ಕ್ಷೇತ್ರವನ್ನು ಕಾಂಗ್ರೆಸಿಗೆ ಗೆದ್ದು ಕೊಡುವ ಸನ್ಹಾಹದಲ್ಲಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ಹೊತ್ತಿರುವ ಸಚಿವ ಎಚ್ .ಕೆ.ಪಾಟೀಲ ಅವರು ಈಗಾಗಲೇ ಒಂದು ಸಭೆ ನಡೆಸಿದ್ದಾರೆ. ಅನೇಕರ ಅಭಿಪ್ರಾಯ ಸಂಗ್ರಹ ನಡೆಸಲಾಗಿದೆ. ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಹೆಸರು ಮುಂಚೂಣಿಯಲ್ಲಿದೆ.

ಪಕ್ಷ ಅವರಿಗೆ ಈ ಬಾರಿ ಸ್ಪರ್ಧೆಗೆ ಟಿಕೆಟ್ ನೀಡುತ್ತದಾ ಎಂಬ ಚರ್ಚೆ ಖಾನಾಪುರ ಮತಕ್ಷೇತ್ರದಲ್ಲಿ ಜೋರಾಗಿ ಹರಿದಾಡುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಖಾನಾಪುರದಲ್ಲಿ ಸೋತಿರುವ ರಾಜಕೀಯ ಪುನರ್ವಸತಿಗಾಗಿ ಉತ್ತರ ಕನ್ನಡ ಲೋಕಸಭಾ ಚುನಾವಣೆಯಲ್ಲಿ ಗೆದ್ದು ದಿಲ್ಲಿಗೆ ಹೋಗುವ ತವಕದಲ್ಲಿದ್ದಾರೆ. ಉತ್ತರ ಕನ್ನಡ ಮತಕ್ಷೇತ್ರವನ್ನು ಈ ಹಿಂದೆ ಮಾರ್ಗರೆಟ್ ಆಳ್ವ ಪ್ರತಿನಿಧಿಸಿದ್ದರು‌. ಕೇಂದ್ರ ಸಚಿವೆಯು ಸಹಾ ಆಗಿದ್ದರು. ಇದೀಗ ಕಾಂಗ್ರೆಸ್ ವರಿಷ್ಠರು ಮತ್ತೊಬ್ಬ ಮಹಿಳೆಯನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಲು ಪರಿಗಣಿಸುತ್ತದಾ ? ಕಾದು ನೋಡಬೇಕಿದೆ.

ಡಾ. ಅಂಜಲಿ ನಿಂಬಾಳ್ಕರ್ ಅವರಿಗೆ ಖಾನಾಪುರ ಮತಕ್ಷೇತ್ರದ ಮೇಲೆ ಭಾರಿ ಹಿಡಿತ ಇದೆ. ಜೊತೆಗೆ ಬೆಳಗಾವಿ ಜಿಲ್ಲೆಗೆ ಸೇರಿರುವ ಕಿತ್ತೂರು ಮತಕ್ಷೇತ್ರ ಸಹಾ ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಗೆ ಬರುತ್ತಿದ್ದು ಅಲ್ಲಿ ಕಾಂಗ್ರೆಸ್ ಪಕ್ಷದ ಬಾಬಾ ಸಾಹೇಬ್ ಪಾಟೀಲ ಶಾಸಕರು. ಉಳಿದಂತೆ ಉತ್ತರ ಕನ್ನಡ ಮತಕ್ಷೇತ್ರದಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಲೋಕಸಭೆಗೆ ಸುಲಭವಾಗಿ ಆಯ್ಕೆಯಾಗಬಹುದು ಎನ್ನುವ ರಾಜಕೀಯ ಲೆಕ್ಕಾಚಾರ ಡಾ‌. ಅಂಜಲಿ ನಿಂಬಾಳ್ಕರ್ ಅವರದ್ದು.

ಸ್ವತಃ ವೈದ್ಯೆ ಆಗಿರುವ ಅವರು ಡಾ.ಅಂಜಲಿತಾಯಿ ಫೌಂಡೇಶನ್ ಮೂಲಕ ಖಾನಾಪುರದ ಹಳ್ಳಿ ಹಳ್ಳಿಗಳಲ್ಲಿ ಸಾಮಾಜಿಕ ಸೇವೆ ನೀಡಿ ಜನಪ್ರಿಯತೆ ಹೊಂದಿದ್ದಾರೆ. ಒಟ್ಟಾರೆ, ಇದೀಗ ಕಾಂಗ್ರೆಸ್ ಹೈಕಮಾಂಡ್ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಟಿಕೆಟ್ ನೀಡಲು ಮುಂದಾಗುತ್ತದಾ ನೋಡಬೇಕಿದೆ.